ಮಡಿಕೇರಿ, ಫೆ.೧: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಂದೂರು ಕ್ರಿಕೆಟ್ ಕ್ಲಬ್(ಎಂಸಿಸಿ) ವತಿಯಿಂದ ಗ್ರಾಮ ವ್ಯಾಪ್ತಿಯ ಸಾರ್ವಜನಿಕರು, ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಗ್ರಾಮದ ಕ್ರೀಡಾಪಟುಗಳು ಭಾಗವಹಿಸಿ ಸಂಭ್ರಮಿಸಿದರು.
ಓಟ, ಹಗ್ಗ ಜಗ್ಗಾಟ, ತಲೆ ತಿರುಗಿಸಿ ಓಟ, ವಾಲಿಬಾಲ್, ಥ್ರೋಬಾಲ್., ಹೀಗೇ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆದ್ದು ಸಂತೋಷಪಟ್ಟರು. ಕ್ರೀಡಾಕೂಟದ ಅಂಗವಾಗಿ ವರ್ಷಂಪ್ರತಿ ಏರ್ಪಡಿಸಿಕೊಂಡು ಬರಲಾಗುತ್ತಿರುವ ನಾಲ್ಕನೇ ವರ್ಷದ ಮಕ್ಕಂದೂರು ಪ್ರೀಮಿಯರ್ ಲೀಗ್(ಎಂಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಧರ್ಮಶಾಸ್ತ ತಂಡ ಪ್ರಥಮ ಸ್ಥಾನ ಗಳಿಸುವದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಹಿಂದೂ ಕ್ರಿಕೆಟ್ ಕ್ಲಬ್(ಹೆಚ್ಸಿಸಿ) ತಂಡ ದ್ವಿತೀಯ ಸ್ಥಾನ ಗಳಿಸಿತು. ನಾಪಂಡ ರವಿ ಕಾಳಪ್ಪ ಅವರಿಗೆ ಸೇರಿದ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಒಟ್ಟು ೮ ತಂಡಗಳು ಭಾಗವಹಿಸಿದ್ದವು. ಧರ್ಮಶಾಸ್ತ, ಹೆಚ್ಸಿಸಿ, ಸ್ಟಾರ್ಲೈಟ್, ಟೀಂ ರೆಬೆಲ್ಸ್, ಭಜರಂಗಿ ಬಾಯ್ಸ್, ರಾಯಲ್ ಟೈರ್ಸ್, ಟೀಂ ಟೈಟನ್ಸ್, ದ ಬಾಯ್ಸ್ ತಂಡಗಳು ಭಾಗವಹಿಸಿದ್ದು, ಈ ಪೈಕಿ ಫೈನಲ್ ಹಂತಕ್ಕೆ ಧರ್ಮಶಾಸ್ತ ಹಾಗೂ ಹೆಚ್ಸಿಸಿ ಪ್ರವೇಶ ಪಡೆದುಕೊಂಡಿದ್ದವು.
ಕ್ರೀಡಾ ಹಬ್ಬದ ಅಂಗವಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ರಿಕೆಟ್ ಪಂದ್ಯಾವಳಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್.ರಮೇಶ್ ಉದ್ಘಾಟಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ವಿಮಲ ರವಿ, ಸದಸ್ಯ ಕಟ್ಟೆಮನೆ ರಮೇಶ್, ದಾನಿಗಳಾದ ಶಾಂತೆಯAಡ ವಿಕಾಸ್, ಚೌಕಿಮನೆ ರಘು ತಿಮ್ಮಯ್ಯ, ಚೀಯಂಡಿ ಸುಜಯ್, ಎಂಸಿಸಿ ಅಧ್ಯಕ್ಷ ವಿಜು ಇದ್ದರು.