ಶ್ರೀಮಂಗಲ, ಫೆ. ೨: ಕೊಡವ ಜನಾಂಗದ ಹಿತಾಸಕ್ತಿಯ ಬಗ್ಗೆ ಚಿಂತನೆ ನಡೆಸಿ ಜನಾಂಗದ ಏಳಿಗೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾಗಿ ಪೊಮ್ಮಕ್ಕಡ ಕೂಟವನ್ನು ಅಸ್ತಿತ್ವಕ್ಕೆ ತರುವ ಕಾರ್ಯಯೋಜನೆ ರೂಪಿಸಲಾಯಿತು ಎಂದು ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಹೇಳಿದರು.
ಮಂಗಳವಾರ ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಪೊಮ್ಮಕ್ಕಡ ಕೂಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಲ್ಲಿ ಅಡಗಿರುವ ಕೌಶಲ್ಯ, ಪ್ರತಿಭೆ, ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಸಂಘ ಸ್ಥಾಪನೆ ಮಾಡಿ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ ಅವರು ಪೊಮ್ಮಕ್ಕಡ ಕೂಟದ ಬೈಲಾವನ್ನು ಸಭೆಯಲ್ಲಿ ಮಂಡಿಸಿದರು.
ಪೊಮ್ಮಕ್ಕಡ ಕೂಟದ ಹೊಸ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆಯನ್ನು ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ಮುಂದಾಳತ್ವದಲ್ಲಿ ನಡೆಸಲಾಯಿತು. ನೂತನ ಅಧ್ಯಕ್ಷೆಯಾಗಿ ಕೊಣಿಯಂಡ ಕಾವ್ಯ ಸೋಮಯ್ಯ, ಉಪಾಧ್ಯಕ್ಷೆಯಾಗಿ ಮೀದೇರಿರ ಕವಿತಾ ರಾಮು, ಜಂಟಿ ಕಾರ್ಯದರ್ಶಿಯಾಗಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಖಜಾಂಚಿಯಾಗಿ ಚೆಕ್ಕೆರ ವಾಣಿ ಸಂಜು, ನಿರ್ದೇಶಕರುಗಳಾಗಿ ಮೂಕಳೆರ ಆಶಾಪೂಣಚ್ಚ, ಮಾನಿಯಪಂಡ ಪಾರ್ವತಿ ದಿನೇಶ್, ಬಲ್ಯಮೀದೇರಿರ ಆಶಾ ಶಂಕರ್, ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಪ್ರೊ ಕೊಟ್ಟಂಗಡ ವಿಜು ದೇವಯ್ಯ, ಗುಮ್ಮಟ್ಟೀರ ಗಂಗಮ್ಮ ಗಣಪತಿ ಹಾಗೂ ಸಲಹಾ ಸಮಿತಿಗೆ ಪೊನ್ನಂಪೇಟೆ ಕೊಡವ ಸಮಾಜದ ಹಾಲಿ ಆಡಳಿತ ಮಂಡಳಿಯ ಚಿರಿಯಪಂಡ ಇಮ್ಮಿ ಬೋಜಮ್ಮ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಮೂಕಳೆರ ಕಾವ್ಯ ಕಾವೇರಮ್ಮ ಒಳಗೊಂಡ ೧೩ ಜನರ ಹೊಸ ತಂಡವನ್ನು ರಚನೆ ಮಾಡಲಾಯಿತು. ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷೆ ಕಾವ್ಯ ಸೋಮಯ್ಯ ಅವರು ಮಾತನಾಡಿ ಜವಾಬ್ದಾರಿಯುತವಾಗಿ ಸಂಘದ ಎಲ್ಲರ ವಿಶ್ವಾಸ ಪಡೆದು ಉತ್ತಮ ಕೆಲಸವನ್ನು ನಿರ್ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ ರೂ. ೧೦ ಸಾವಿರ ಹಾಗೂ ಪೊಮ್ಮಕ್ಕಡ ಕೂಟದ ನೂತನ ಉಪಾಧ್ಯಕ್ಷೆ ಮೀದೇರಿರ ಕವಿತಾ ರಾಮು ಅವರು ರೂ. ೫ ಸಾವಿರ ಆರಂಭಿಕ ಆರ್ಥಿಕ ನೆರವನ್ನು ಸಂಘಕ್ಕೆ ನೀಡಿದರು. ಕೊಡವ ಸಮಾಜದ ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿ, ಖಜಾಂಚಿ ಮೂಕಳಮಾಡ ಕಟ್ಟಿ ಪೂಣಚ್ಚ ಸ್ವಾಗತಿಸಿದರು. ಮೂಕಳೆರ ಕಾವ್ಯ ಕಾವೇರಮ್ಮ ವಂದಿಸಿದರು. ನಿರ್ದೇಶಕರಾದ ಕೊಣಿಯಂಡ ಸಂಜು ಸೋಮಯ್ಯ, ಚೀರಂಡ ಕಂದ ಸುಬ್ಬಯ್ಯ ವೇದಿಕೆಯಲ್ಲಿ ಹಾಜರಿದ್ದರು.