ಕಣಿವೆ, ಫೆ. ೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನದಿ ದಂಡೆಯೊAದರ ರಸ್ತೆಯಲ್ಲಿ ವಾಸವಿರುವ ನಿವೃತ್ತ ಯೋಧರ ಕುಟುಂಬಗಳು ಸೇರಿದಂತೆ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ. ಇದರಿಂದ ಬೇಸತ್ತ ನಿವಾಸಿಗಳು ಪಂಚಾಯಿತಿಯ ಚರಂಡಿಗೆ ಮಣ್ಣು ಸುರಿದು ಕೊಳವೆ ಮುಚ್ಚಿ ಪ್ರತಿಭಟಿಸಿದ್ದಾರೆ.
ಹಾರಂಗಿ ನದಿಗೆ ಅಳವಡಿಸಿರುವ ಸೇತುವೆ ಬಳಿಯ ನದಿಯಂಚಿನ ಜನವಸತಿ ಪ್ರದೇಶದಲ್ಲಿ ಈ ಹಿಂದೆ ನಿರ್ಮಿಸಿದ್ದ ಚರಂಡಿ ಅವೈಜ್ಞಾನಿಕವಾಗಿದ್ದು ಮನೆಗಳ ಬಳಕೆಯಾಗುವ ತ್ಯಾಜ್ಯ ನೀರು ಇಲ್ಲಿನ ನಿವೃತ್ತ ಯೋಧ ಶ್ರೀಧರ ಹಾಗೂ ಬಾಲಕೃಷ್ಣ ಎಂಬವರ ಮನೆಯ ಮುಂಬದಿಯಲ್ಲಿ ಹರಿದು ಚರಂಡಿ ತುಂಬಿ ಹೋಗಿತ್ತು.
ಇದರಿಂದಾಗಿ ಸೊಳ್ಳೆಗಳ ಸಂತತಿ ಹೆಚ್ಚುವ ಜೊತೆಗೆ ಕೊಳೆತ ದುರ್ವಾಸನೆ ಉಂಟುಮಾಡಿತ್ತು.
ಚರಂಡಿಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿಕೊಡಬೇಕೆಂದು ಇಲ್ಲಿನ ನಿವಾಸಿಗಳು ಸ್ಥಳೀಯ ಗ್ರಾ.ಪಂ.ಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಇದುವರೆಗೂ ಪಂಚಾಯಿತಿ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ ಎನ್ನಲಾಗಿದೆ.
ಬಾಧಿಸಿದ ಡೆಂಗ್ಯೂ
ಚರAಡಿಯ ಅನೈರ್ಮಲ್ಯ ನೀರಿನಲ್ಲಿ ಸಂತಾನೋತ್ಪತ್ತಿ ವೃದ್ಧಿಸಿದ ಸೊಳ್ಳೆಗಳ ಕಾಟದಿಂದ ಇಲ್ಲಿನ ನಿವೃತ್ತ ಯೋಧ ೮೦ ರ ಪ್ರಾಯದ ಶ್ರೀಧರ ಹಾಗೂ ಶಾರದಾ ದಂಪತಿ ಡೆಂಗ್ಯುಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಮನೆಗೆ ಮರಳಿದ್ದರು.
ವಾಸನೆ ಬೀರುತ್ತಿದ್ದ ಚರಂಡಿಗೆ ಮಣ್ಣು
ಮನೆಯ ಮುಂಬದಿಯ ಚರಂಡಿಯಲ್ಲಿ ಕೊಳೆತ ತ್ಯಾಜ್ಯದ ದುರ್ವಾಸನೆಯಿಂದ ಕಂಗಾಲಾದ ಯೋಧ ಶ್ರೀಧರ್ ಪುತ್ರ ಕಾರ್ಗಿಲ್ ಯೋಧರೂ ಆದ ಕೆ.ಎಸ್. ಪ್ರಭಾಕರ್ ಹಾಗೂ ಮತ್ತೋರ್ವ ಯೋಧ ನೆರೆಮನೆ ವಾಸಿ ಬಾಲಕೃಷ್ಣ ವಾಸನೆ ಬೀರಿದ ಚರಂಡಿಗೆ ಲೋಡುಗಟ್ಟಲೆ ಮಣ್ಣು ತಂದು ಸುರಿದು ಚರಂಡಿಯನ್ನು ಮುಚ್ಚಿ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ. - ಕೆ.ಎಸ್. ಮೂರ್ತಿ, ಕಣಿವೆ