ಸೋಮವಾರಪೇಟೆ, ಫೆ.೧ : ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಹರಗ ಗ್ರಾಮದಲ್ಲಿ ಪೂರ್ವಿಕರ ಕಾಲದಿಂದಲೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದಂತೆ ಸ್ಮಶಾನಕ್ಕಾಗಿ ಮೀಸಲಿರಿಸಿದ್ದ ಜಾಗವನ್ನು ಗ್ರಾಮದ ವ್ಯಕ್ತಿಯೋರ್ವರು ಒತ್ತುವರಿಗೆ ಯತ್ನಿಸುತ್ತಿದ್ದು, ಕಂದಾಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಒತ್ತುವರಿಗೆ ತಡೆಯೊಡ್ಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರಗ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳ ಸದಸ್ಯರು, ಗ್ರಾಮದ ಸ.ನಂ. ೩೪/೮ಪಿ೧ರಲ್ಲಿ ಸುಮಾರು ೨ ಏಕರೆಯಷ್ಟು ಜಾಗವನ್ನು ಪೂರ್ವಿಕರ ಕಾಲದಿಂದಲೂ ಪರಿಶಿಷ್ಟ ಜಾತಿ ಸಮುದಾಯದ ಸ್ಮಶಾನವನ್ನಾಗಿ ಬಳಸಿಕೊಂಡು ಬರಲಾಗುತ್ತಿದ್ದು, ಈ ಜಾಗವನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿತ್ತು. ಆದರೆ ಕಳೆದ ಒಂದು ವಾರದ ಹಿಂದೆ ನಮ್ಮದೇ ಸಮುದಾಯಕ್ಕೆ ಸೇರಿದ ವ್ಯಕ್ತಿಯೋರ್ವರು ಸ್ಮಶಾನ ಜಾಗಕ್ಕೆ ಬೇಲಿ ಹಾಕಿ ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ೧೯.೧೦.೨೦೧೨ರಂದು ಈ ಜಾಗದಲ್ಲಿ ೨೫ ಸೆಂಟ್ ಜಾಗವನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ ಒಟ್ಟಾರೆಯಾಗಿ ೨ ಏಕರೆ ಜಾಗವನ್ನು ನಾವುಗಳು ಈ ಹಿಂದಿನಿAದಲೂ ಸ್ಮಶಾನಕ್ಕಾಗಿ ಗುರುತಿಸಿ, ಹಾಗೆಯೇ ಉಳಿಸಿಕೊಂಡು ಬಂದಿದ್ದೇವೆ. ಇದೀಗ ನಮ್ಮ ಸಮುದಾಯದ ವ್ಯಕ್ತಿಯೋರ್ವರು ಖಾಸಗಿ ಸರ್ವೆ ನಡೆಸಿ, ಉಳಿದ ಜಾಗಕ್ಕೆ ಬೇಲಿ ಹಾಕಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಗೋಷ್ಠಿಯಲ್ಲಿದ್ದ ಹೆಚ್.ಎಸ್. ಜೋಯಪ್ಪ ದೂರಿದರು.

ಸ್ಮಶಾನಕ್ಕೆ ಮೀಸಲಿಟ್ಟ ಜಾಗದ ಸುತ್ತಲೂ ಇತರ ಸಮುದಾಯದವರ ಕಾಫಿ ತೋಟ ಇದೆ. ಇವರುಗಳ್ಯಾರೂ ಒತ್ತುವರಿ ಮಾಡಿಕೊಂಡಿಲ್ಲ. ಆದರೆ ಒತ್ತುವರಿಗೆ ಯತ್ನಿಸುತ್ತಿರುವ ನಮ್ಮ ಸಮುದಾಯದ ವ್ಯಕ್ತಿಗೆ ಈ ಸ್ಥಳದಲ್ಲಿ ಯಾವುದೇ ಜಾಗ, ವ್ಯವಸಾಯ ಭೂಮಿ ಇಲ್ಲದಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿ, ದಾಖಲೆ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಸರ್ಕಾರದಿಂದ ಸ.ನಂ.೩೪/೧೯೮ರಲ್ಲಿ ಇದೇ ವ್ಯಕ್ತಿಗೆ ೧೦ ಸೆಂಟ್ ಜಾಗ ನೀಡಲಾಗಿದೆ. ಅದರಲ್ಲಿದ್ದ ಮನೆಯನ್ನು ಕೆಡವಿ ತೋಟ ಮಾಡಿಕೊಂಡು ಇದೀಗ ಸ್ಮಶಾನಕ್ಕೆ ಮೀಸಲಿರಿಸಿರುವ ಜಾಗವನ್ನು ಕಬಳಿಸುವ ಯತ್ನ ನಡೆಸಲಾಗುತ್ತಿದೆ. ತಕ್ಷಣ ಕಂದಾಯ ಇಲಾಖಾಧಿಕಾರಿಗಳು, ತಹಶೀಲ್ದಾರರು, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಪರಿಶಿಷ್ಟ ಜಾತಿಗೆ ಮೀಸಲಿರುವ ಸ್ಮಶಾನ ಜಾಗವನ್ನು ಹಾಗೆಯೇ ಉಳಿಸಿಕೊಡಬೇಕು. ವೈಯಕ್ತಿಕವಾಗಿ ಜಾಗದ ಹಕ್ಕು ನೀಡಬಾರದು ಎಂದು ಒತ್ತಾಯಿಸಿದರು.

ಸ್ಮಶಾನಕ್ಕಾಗಿ ಮೀಸಲಿರುವ ಜಾಗವನ್ನು ಕಬಳಿಸಲು ಅಕ್ರಮ ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿರುವುದಕ್ಕೆ, ನಾವುಗಳು ತಕರಾರು ಅರ್ಜಿ ಸಲ್ಲಿಸಿದ್ದೇವೆ. ನಿಯಮ ಮೀರಿ ಜಾಗದ ಹಕ್ಕುಪತ್ರ ನೀಡಿದರೆ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗೋಷ್ಠಿಯಲ್ಲಿದ್ದ ಹರಗ ಗ್ರಾಮದ ಹೆಚ್.ಎಸ್. ಶಿವಣ್ಣ, ಹೆಚ್.ಜೆ. ಲಿಖಿತ್, ಕೆ.ಇ. ರಾಜಶೇಖರ್, ಸಿ.ಜೆ. ಜಯಂತಿ ಅವರುಗಳು ಎಚ್ಚರಿಸಿದರು.