ಗೋಣಿಕೊಪ್ಪಲು, ಜ. ೩೧: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಅಣ್ಣಿರ ಹರೀಶ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಆಲೀರ ರಶೀದ್ ಅಧಿಕಾರ ಸ್ವೀಕರಿಸಿದರು.

ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಾಗೂ ಕೆಲ ಪಂಚಾಯಿತಿಯ ಸದಸ್ಯರೊಂದಿಗೆ ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿದ ಇವರು ಇಲ್ಲಿನ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು. ಸಮಪÀðಕವಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಲು ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪುಟ್ಟರಾಜುರವರಿಗೆ ನಿರ್ದೇಶನ ನೀಡಿದರು.

ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವು ಪ್ರತಿನಿತ್ಯ ಶುಚಿತ್ವದಿಂದ ಕೂಡಿರಬೇಕು. ನಿಲ್ದಾಣದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಸ್ಥಳವು ಶುಚಿತ್ವದಿಂದ ಇರುವಂತೆ ನೋಡಿಕೊಳ್ಳಲು ಪೌರ ಕಾರ್ಮಿಕ ಸಿಬ್ಬಂದಿಗೆ ಸೂಚನೆ ನೀಡಿದರು. ಅಲ್ಲದೆ ಶೌಚಾಲಯದ ಸ್ವಚ್ಛತೆ ಕಾಪಾಡಲು ತಿಳಿಸಿದರು.

ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ವ್ಯವಸ್ಥೆ ನಿಭಾಯಿಸುವ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿ ಇಲ್ಲದೇ ಇರುವುದನ್ನು ಗಮನಿಸಿದ ನೂತನ ಅಧ್ಯಕ್ಷರು ನೇರವಾಗಿ ಪೊಲೀಸ್ ಠಾಣೆಗೆ ತೆರಳಿದರು. ಠಾಣೆಯ ಅಧಿಕಾರಿಗಳಾದ ನವೀನ್ ಕುಮಾರ್‌ರೊಂದಿಗೆ ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಅಲ್ಲದೆ ರಾತ್ರಿ ವೇಳೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಬೀಟ್ ಇನ್ನಷ್ಟು ಬಿಗಿಗೊಳಿ ಸಬೇಕು, ಬಸ್ ನಿಲ್ದಾಣದ ಬೇಕರಿ ಹಾಗೂ ಹೊಟೇಲ್ ಮುಂದಿನ ರಸ್ತೆಯ ಬದಿಯಲ್ಲಿಯೇ ಖಾಸಗಿ ಬಸ್‌ಗಳು ನಿಲುಗಡೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನ ಸೆಳೆದರು. ಅಲ್ಲದೆ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ನೂತನ ಅಧ್ಯಕ್ಷ ಅಣ್ಣಿರ ಹರೀಶ್, ಪ್ರತಿದಿನ ಪಂಚಾಯಿತಿ ಕಚೇರಿಯಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ರ ವರೆಗೆ ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತೇನೆ. ಸಣ್ಣಪುಟ್ಟ ಸಮಸ್ಯೆ ಇದ್ದಲ್ಲಿ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳುತ್ತೇನೆ. ಗಂಭೀರ ಸ್ವರೂಪದ ಸಮಸ್ಯೆ ಇದ್ದಲ್ಲಿ ಮಾಸಿಕ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ವಾರಕ್ಕೊಮ್ಮೆ ಪ್ರತಿ ವಾರ್ಡ್ಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿಯ ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತೇನೆ. ಶಾಸಕರಾದ ಎ.ಎಸ್. ಪೊನ್ನಣ್ಣ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆಯೇ, ಪಂಚಾಯಿತಿ ಸದಸ್ಯರ ನಿಯೋಗ ತೆರಳಿ ಪಂಚಾಯಿತಿಯ ಅಭಿವೃದ್ಧಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮನವಿ ಸಲ್ಲಿಸಲಾಗುವುದು. ಪ್ರಮುಖವಾಗಿ ಕುಡಿಯುವ ನೀರಿನ ಬಗ್ಗೆ ಗಮನ ಸೆಳೆಯಲಾಗುವುದು ಎಂದರು.

ಭೇಟಿಯ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೋಳೆರ ಭಾರತಿ, ಮೂಕಳೇರ ಸುಮಿತ ಗಣೇಶ್, ಕರ್ತಮಾಡ ರಸಿಕ, ಜುನೈದ್, ಯಮುನ ಪಿ.ಜಿ. ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಮುಂತಾದವರು ಹಾಜರಿದ್ದರು. -ಹೆಚ್.ಕೆ. ಜಗದೀಶ್