ಗೋಣಿಕೊಪ್ಪಲು, ಜ. ೩೧: ಪತ್ರಕರ್ತನ ಸೋಗಿನಲ್ಲಿ ನಡುರಾತ್ರಿ ೧೨ ಗಂಟೆಯ ವೇಳೆ ಸರ್ಕಾರಿ ಆಸ್ಪತ್ರೆಗೆ ತೆರಳುವ ಮೂಲಕ ಅಲ್ಲಿರುವ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಮೇಲೆ ತನ್ನ ಪೌರುಷ ತೋರಿಸಿದಲ್ಲದೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈತನ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಪತ್ರಕರ್ತನ ಸೋಗಿನಲ್ಲಿ ಡಿ. ನಾಗೇಶ್ ಎಂಬಾತ ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಗೆ ನಡುರಾತ್ರಿಯ ವೇಳೆ ತೆರಳಿ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿಯು ಇರುವ ಕೊಠಡಿಯ ಬಾಗಿಲನ್ನು ಬಲವಂತವಾಗಿ ಬಡಿದು, ಕಾಲಿನಿಂದ ಒದ್ದು ಬಾಗಿಲನ್ನು ತೆರೆಸಿದ್ದಾನೆ. ಈ ವೇಳೆ ಗಾಬರಿಗೊಂಡ ಮಹಿಳಾ ಸಿಬ್ಬಂದಿ ಭಯಗೊಂಡು ಜೋರಾಗಿ ಕಿರುಚಿಕೊಂಡಿದ್ದಾಳೆ.
ಜೋರಾದ ಕಿರುಚಾಟ ಕೇಳಿ ಸಮೀಪದ ಕೊಠಡಿಯಲ್ಲಿದ್ದ ಕರ್ತವ್ಯ ನಿರತ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯು ಸ್ಥಳಕ್ಕೆ ಬರುತ್ತಿದ್ದಂತೆಯೇ ಈತನ ಅವಾಚ್ಯ ಶಬ್ದಗಳು ಮಿತಿಮೀರಿದ್ದವು. ಅಲ್ಲದೆ ಹಲವರ ಮೇಲೆ ಹಲ್ಲೆಗೆ ಮುಂದಾಗಿರುವುದು ವೈರಲ್ ಆದ ವೀಡಿಯೋದಲ್ಲಿ ಸೆರೆಯಾಗಿದೆ. ಸ್ಥಳದಲ್ಲಿ ವೀಡಿಯೋ ಮಾಡುತ್ತಿದ್ದವರ ಮೇಲೆ ಈತ ಹರಿಹಾಯ್ದಿದ್ದಾನೆ. ತನ್ನ ಫೋಟೋ ತೆಗೆಯದಂತೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾನೆ. ಆಸ್ಪತ್ರೆಯಲ್ಲಿದ್ದ ಮಹಿಳೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನಿಗೆ ಧರ್ಮದೇಟು ನೀಡಿದ್ದಾರೆ.
ವೀಡಿಯೋ ಚಿತ್ರೀಕರಣ ಮಾಡುತ್ತಿದ್ದವನ ಮೇಲೆ ಆತ ತನ್ನ ಪೌರುಷ ತೋರಿಸುತ್ತಿದ್ದಂತೆಯೇ ವೀಡಿಯೋದಲ್ಲಿ ತನ್ನ ಮುಖವು ಕಾಣಿಸದಂತೆ ಮಾಡುವ ನಿಟ್ಟಿನಲ್ಲಿ ಮುಖವನ್ನು ಬಟ್ಟೆಯಲ್ಲಿ ಮುಚ್ಚಿಕೊಳ್ಳುವ ಪ್ರಯತ್ನವೂ ನಡೆದಿದೆ. ಈ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಗಲಾಟೆ, ದಾಂಧಲೆ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಪ್ರಯತ್ನ ನಡೆದಿದ್ದರೂ ಇಲ್ಲಿನ ಆಡಳಿತ ಅಧಿಕಾರಿಗಳು ರಾತ್ರಿ ವೇಳೆ ಗಲಾಟೆ ನಡೆಸಿ ಸರ್ಕಾರಿ ಸಿಬ್ಬಂದಿಗಳ ಕೆಲಸಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ಮೇಲೆ ದೂರು ನೀಡುವಲ್ಲಿ ಇನ್ನು ಕೂಡ ಕ್ರಮ ಕೈಗೊಂಡಿಲ್ಲದಿರುವ ವಿಷಯ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಶಯಕ್ಕೆಡೆ ಮಾಡಿದೆ.
ರಾತ್ರಿ ಪಾಳಯದಲ್ಲಿ ಕರ್ತವ್ಯದಲ್ಲಿರುವ ಮಹಿಳಾ ಸಿಬ್ಬಂದಿಗಳಿಗೆ ಈತನ ಕಾರ್ಯವೈಖರಿ ತೀವ್ರ ಮುಜುಗರದೊಂದಿಗೆ ಗಾಬರಿಯು ಹುಟ್ಟಿಸಿದೆ. ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಹಾಗೂ ವಿಶೇಷವಾಗಿ ಮಹಿಳಾ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಇಲ್ಲದಾಗಿದೆ. ಘಟನೆ ನಡೆದು ಹಲವು ದಿನಗಳಾದರೂ ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಈತನ ಬಗ್ಗೆ ಪೊಲೀಸ್ ದೂರು ನೀಡಲು ಇನ್ನೂ ಮುಂದೆ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ, ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. -ಹೆಚ್.ಕೆ.ಜಗದೀಶ್