ಸಿದ್ದಾಪುರ, ಜ. ೩೧: ಜಿಲ್ಲೆಯಲ್ಲೇ ಅತೀ ಹೆಚ್ಚು ಕ್ರೀಡಾ ಆಯೋಜನೆ ಮಾಡುವ ಸಿದ್ದಾಪುರ, ನೆಲ್ಲಿಹುದಿಕೇರಿ ಮತ್ತು ಮಾಲ್ದಾರೆ ಗ್ರಾಮಗಳಲ್ಲಿ ಸಾವಿರಾರು ಮಂದಿ ಕ್ರೀಡಾಪಟುಗಳಿದ್ದರೂ ಕೂಡ ಕ್ರೀಡೆಗೆ ಪೂರಕವಾದ ಮೈದಾನದ ಕೊರತೆಯು ಕ್ರೀಡಾ ಚಟುವಟಿಕೆಗಳಿಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾ ಋತುವಿನಲ್ಲಿ ಯುವಕರು ಸ್ಥಳೀಯ ಗದ್ದೆಗಳನ್ನು ಬಳಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರ್ಯಾಸವೆಂದರೆ ಮೈದಾನದ ಕೊರತೆಯಿಂದಾಗಿ ವ್ಯಾಪ್ತಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಕೂಡ ಕ್ರೀಡಾ ಸ್ಪರ್ಧೆಯಲ್ಲಿ ಮಿಂಚುವ ಅವಕಾಶ ಕಳೆದುಕೊಂಡಿದ್ದಾರೆ.
ಅರಣ್ಯ ಸಚಿವರ ಆದೇಶಕ್ಕೂ ಮನ್ನಣೆ ಇಲ್ಲ: ಮಾಲ್ದಾರೆ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಮೈದಾನವಿಲ್ಲ. ಶಾಲೆಯ ಸಮೀಪದಲ್ಲೇ ಅರಣ್ಯ ಇಲಾಖೆಗೆ ಸೇರಿದ ಜಾಗವಿದ್ದು ಅದನ್ನೇ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಕ್ರೀಡಾ ಚಟುವಟಿಕೆಗೆ ಬಳಸುತ್ತಿದ್ದಾರೆ. ಮೈದಾನದ ಮಧ್ಯೆ ಮರಗಳಿದ್ದು ಅದನ್ನು ತೆರವುಗೊಳಿಸುವಂತೆ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಇಲ್ಲಿನ ಯುವಕರು ಚುನಾವಣಾ ಸಂದರ್ಭದಲ್ಲಿ ಮೈದಾನದ ಸಮಸ್ಯೆ ಮುಂದಿಟ್ಟು ಚುನಾವಣಾ ಬಹಿಷ್ಕಾರಕ್ಕೆ ಕೂಡ ಮುಂದಾಗಿದ್ದರು. ಇತ್ತೀಚೆಗೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಮಾಲ್ದಾರೆ ವ್ಯಾಪ್ತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಯುವಕರು ಸಚಿವರಿಗೆ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಮೈದಾನಕ್ಕೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಸ್ಥಳ ಪರಿಶೀಲಿಸಿ ಕೂಡಲೇ ಮೈದಾನಕ್ಕೆ ಸ್ಥಳ ನೀಡುವಂತೆ ಅಧಿಕಾರಿಗಳಿಗೆ ಆದೇಶವನ್ನು ನೀಡಿದ್ದರು. ಆದರೆ ಸಚಿವರ ಮಾತು ಇಂದಿಗೂ ಕೇವಲ ಮಾತಾಗಿಯೇ ಉಳಿದಿರುವುದು ದುರದೃಷ್ಟಕರ ಸಂಗತಿ.
ಸಿದ್ದಾಪುರ ಗ್ರಾಮವು ಕ್ರೀಡಾ ಗ್ರಾಮವೆಂದೇ ಖ್ಯಾತಿ ಹೊಂದಿದೆ. ಇಲ್ಲಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಫುಟ್ಬಾಲ್ ಎಂಬಿತ್ಯಾದಿ ಕ್ರೀಡೆಗಳಲ್ಲಿ ಹೆಸರುವಾಸಿಯಾದ ಅಸಂಖ್ಯಾತ ಪ್ರತಿಭೆಗಳಿವೆ. ಸಿದ್ದಾಪುರದಲ್ಲಿ ಮೈದಾನದ ಕೊರತೆಯಿಂದಾಗಿ ಕ್ರೀಡಾ ಆಯೋಜನೆ ಇಲ್ಲದಂತಾಗಿದೆ. ಸಿದ್ದಾಪುರದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಹೈಸ್ಕೂಲ್ ಪೈಸಾರಿ ಎಂಬಲ್ಲಿ ಶಾಲಾ ಮೈದಾನವನ್ನು ಸಾರ್ವಜನಿಕರು ಬಳಸುತ್ತಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳ ಆಯೋಜನೆ ಕೂಡ ನಡೆಯುತ್ತಿತ್ತು. ರಾಜ್ಯಮಟ್ಟದ ಪಂದ್ಯಾವಳಿಗಳು ನಡೆಯುತ್ತಿದ್ದವು. ತದ ನಂತರ ಶಾಲೆಯು ಖಾಸಗಿ ಶಿಕ್ಷಣ ಸಂಸ್ಥೆಯ ಸುಪರ್ದಿಗೆ ಹೋದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿದ್ದ ಮೈದಾನವು ಕೇವಲ ಶಾಲೆಗೆ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಕ್ರೀಡಾ ಚಟುವಟಿಕೆ ಇಲ್ಲದೆ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಮೈದಾನದ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ರವರಿಗೆ ಮನವಿ ಮಾಡಿಕೊಂಡಿದ್ದಾರೆ.
ಕ್ರೀಡೆಗಳಿಗೆ ಪ್ರೋತ್ಸಾಹ-ಮೈದಾನಕ್ಕೆ ನಿರುತ್ಸಾಹ : ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಮೈದಾನದ ಕೊರತೆಯ ಪರಿಣಾಮವಾಗಿ ಇಲ್ಲಿನ ಯುವಕರು ಸ್ಥಳೀಯ ಕೃಷಿ ಗದ್ದೆಗಳನ್ನು ಕ್ರೀಡಾ ಆಯೋಜನೆಗೆ ಬಳಸುತ್ತಿದ್ದಾರೆ. ಇಲ್ಲಿನ ಅನೇಕ ಕ್ರೀಡಾ ಚಟುವಟಿಕೆಗಳಲ್ಲಿ ಅತಿಥಿಗಳಾಗಿ ಆಗಮಿಸುವ ಜನಪ್ರತಿನಿಧಿಗಳ ಬಳಿ ಮೈದಾನಕ್ಕಾಗಿ ಹಲವಾರು ಬಾರಿ ಮನವಿ ಮಾಡಿದ್ದರೂ ಕೂಡ ಯುವಕರಿಗೆ ಪ್ರೋತ್ಸಾಹ ನೀಡಿ, ಧನ ಸಹಾಯ ನೀಡುವ ಅವರು ಮೈದಾನದ ಪ್ರಸ್ತಾಪವನ್ನು ಮೂಲೆಗುಂಪು ಮಾಡಿದ್ದಾರೆ. ಅತೀ ಹೆಚ್ಚು ಬಾರಿ ಕ್ರೀಡಾ ಪಂದ್ಯಾವಳಿಗಳಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಮಂಥರ್ ಗೌಡ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ನೆಲ್ಲಿಹುದಿಕೇರಿಯಲ್ಲಿ ಆಟದ ಮೈದಾನ ನಿರ್ಮಾಣದ ಕನಸು ಇರುವುದಾಗಿ ಹೇಳಿಕೊಂಡಿದ್ದರು. ಇದೀಗ ಶಾಸಕರಾದ ಬಳಿಕವೂ ಮೈದಾನದ ಕುರಿತು ಚಕಾರವೆತ್ತದೆ ಇರುವುದು ಯುವಕರ ಅಸಮಾಧಾನಕ್ಕೆ ಕಾರಣವಾಗಿದೆ. - ಎ.ಎನ್. ವಾಸು, ಸಿದ್ದಾಪುರ