ತಮಿಳುನಾಡು, ಜ. ೩೧: ತಮಿಳುನಾಡಿನಲ್ಲಿರುವ ಯಾವುದೇ ದೇವಾಲಯಗಳಿಗೆ ಹಿಂದೂಯೇತರ ಸಮುದಾಯದವರು ಪ್ರವೇಶಿಸದಂತೆ ದೇವಾಲಯದ ಧ್ವಜಸ್ತಂಭ (ಕೊಡಿಮರ)ದಿಂದ ಮುಂದಕ್ಕೆ ‘ಹಿಂದೂಯೇತರರಿಗೆ ಪ್ರವೇಶವಿಲ್ಲ’ ಎಂಬ ಸಂದೇಶವನ್ನು ಫಲಕಗಳಲ್ಲಿ ಅಳವಡಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಆದೇಶಿಸಿದೆ.

‘ಇತ್ತೀಚಿನ ದಿನಗಳಲ್ಲಿ ಹಿಂದೂಯೇತರರು ದೇವಾ ಲಯಗಳಿಗೆ ಧಾರ್ಮಿಕೇತರ ವಿಷಯಗಳಿಗಾಗಿ ಆಗಮಿಸುತ್ತಿದ್ದಾರೆ. ಪಳನಿಯಲ್ಲಿನ ದೇವಾಲಯದಲ್ಲಿ ಹಿಂದೂಯೇತರರು ಆಗಮಿಸಿ ಮಾಂಸಹಾರ ಸೇವನೆ ಮಾಡಿರುವ ಬಗ್ಗೆಯೂ ವರದಿಯಾಗಿದೆ. ದೇವಾಲಯಗಳು ‘ಪಿಕ್ನಿಕ್’ ಅಥವಾ ಪ್ರವಾಸಿ ಸ್ಥಳಗಳಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಬೆಂಚ್‌ನ ಜಸ್ಟಿಸ್ ಎಸ್.ಶ್ರೀಮತಿ ಅವರು, ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆಗೆ ಈ ಆದೇಶ ನೀಡಿದ್ದಾರೆ. ಹಿಂದೂಗಳ ಮೂಲಭೂತ ಹಕ್ಕಾಗಿರುವ ‘ಹಿಂದೂ ಧರ್ಮದ ಪಾಲನೆ’ ಈ ತೀರ್ಪಿನಲ್ಲಿ ಎತ್ತಿ ಹಿಡಿಯಲಾಗಿದೆ. ದೇವಾಲಯಗಳ ಧ್ವಜಸ್ತಂಭಗಳ ಸಮೀಪ ಹಾಗೂ ಇತರ ಪ್ರಮುಖ ಕಡೆಗಳಲ್ಲಿ ಸಂದೇಶ ಬಿತ್ತುವ ಫಲಕಗಳನ್ನು ಅಳವಡಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಿಂದೂಯೇತರರು ದೇವಾಲಯಕ್ಕೆ ಪ್ರವೇಶಿಸಲೇಬೇಕಿದ್ದಲ್ಲಿ, ದೇವಾಲಯಗಳಲ್ಲಿನ ನಿಯಮ ಹಾಗೂ ಹಿಂದೂ ಧರ್ಮದ ಮೇಲೆ ಅವರಿಗೆ ನಂಬಿಕೆಯಿದೆ ಎಂಬುದಾಗಿ ದೃಢೀಕರಣ ಪತ್ರದ ಮೂಲಕ ಅನುಮತಿ ಪಡೆಯಬೇಕಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಮಿಳುನಾಡು ನಿವಾಸಿ ಡಿ.ಸೆಂತಿಲ್‌ಕುಮಾರ್ ಅವರು, ರಾಜ್ಯದಲ್ಲಿರುವ ಅರುಮಿಗು ಪಳನಿ ದಂಡಾಯುತ ಪಣಿಸ್ವಾಮಿ ದೇವಾಲಯ ಹಾಗೂ ಪಳನಿಯಲ್ಲಿರುವ ಅದರ ಉಪದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧಿಸುವಂತೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯದ ಎಲ್ಲ ದೇವಾಲಯಗಳಲ್ಲಿಯೂ ಈ ಕ್ರಮ ಅಳವಡಿಸುವಂತೆ ಮಂಗಳವಾರ ಆದೇಶ ಹೊರಡಿಸಿದೆ.