ಮಡಿಕೇರಿ, ಜ. ೩೦: ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭೆ ಸ್ಥಾನದ ಅವಶ್ಯಕತೆ ಇದೆ. ಇದಕ್ಕೆ ಪಕ್ಷಾತೀತ ಹೋರಾಟ ಅನಿವಾರ್ಯ ಎಂದು ಹಿರಿಯ ರಾಜಕಾರಣಿ, ಮಾಜಿ ಸಚಿವ ಯಂ.ಸಿ. ನಾಣಯ್ಯ ಅಭಿಮತ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಸಿ ರಾಜ್ಯವಾಗಿದ್ದ ಸಂದರ್ಭ ಪ್ರತ್ಯೇಕ ವಿಧಾನಸಭೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಸಿ ರಾಜ್ಯವಾಗಿಯೇ ಕೊಡಗು ಉಳಿಯಬೇಕಾಗಿತ್ತು. ಅನಿವಾರ್ಯ ಕಾರಣದಿಂದ ಅದು ಆಗಲಿಲ್ಲ. ಲಕ್ಷದ್ವೀಪದಂತಹ ಸಣ್ಣ ಸಣ್ಣ ಭೂಪ್ರದೇಶಗಳಲ್ಲಿ ಪ್ರತ್ಯೇಕ ಲೋಕಸಭೆ ಕ್ಷೇತ್ರವಿದೆ ಅದೇ ರೀತಿ ಜಿಲ್ಲೆಗೂ ಅನ್ವಯಿಸಬೇಕು. ಇಂದು ಜಿಲ್ಲೆಗೆ ಪ್ರತ್ಯೇಕ ಲೋಕಸಭೆ ಸ್ಥಾನದ ಅವಶ್ಯಕತೆ ಇದೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಜಿಲ್ಲೆಯ ಶಾಸಕರು, ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪಕ್ಷದವರು, ಜನತೆ ಸೇರಿ ಪಕ್ಷಾತೀತವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸುವ ಮೂಲಕ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಹೇಳಿದರು.