ಪೆರಾಜೆ, ಜ. ೩೦: ಒಂಟಿಸಲಗವೊAದು ಪೆರಾಜೆ ಗ್ರಾಮದಲ್ಲಿ ತಿರುಗಾಡಿ ಬಳಿಕ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ಬಿಳಿಯಾರಿನಲ್ಲಿ ನಿಂತಿದ್ದ ಓಮಿನಿ ಕಾರಿಗೆ ಹಾನಿ ಮಾಡಿರುವ ಘಟನೆ ಇಂದು ಬೆಳಿಗ್ಗೆ ೮.೩೦ರ ವೇಳೆಗೆ ನಡೆದಿದೆ.
ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆ ಅವರ ಕಾರು ಇದಾಗಿದ್ದು, ಕಾರಿನ ಚಾಲಕ ಗೂನಡ್ಕ ಅವಿನಾಶ್ ಅಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ ದಾಳಿ ಮಾಡುತ್ತಿದ್ದ ವೇಳೆ ಅವರು ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರು, ಕೈಗೆ ಸ್ವಲ್ಪ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ ೮.೩೦ಕ್ಕೆ ಶಾಲಾ ವಿದ್ಯಾರ್ಥಿಗಳು ಇದೇ ಭಾಗದಲ್ಲಿ ಬರುವವರಾಗಿದ್ದು, ಗ್ರಾಮದಲ್ಲಿ ಆನೆ ಬಂದಿರುವ ಸುದ್ದಿ ಮತ್ತು ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಎಚ್ಚರಿಕೆ ಸಂದೇಶ ವನ್ನು ಹರಿಯಬಿಡಲಾಗಿತ್ತು, ಆನೆ ಗ್ರಾಮದ ಪೀಚೆ, ಕುಂಡಾಡು, ನಿಡ್ಯಮಲೆ, ಕುಂಬಳಚೇರಿ, ಕೋಡಿ ಮತ್ತು ಕನ್ನಡ ಪೆರಾಜೆ ಭಾಗದಲ್ಲಿ ಸುತ್ತಾಡಿ ತೆರಳಿದೆ.
ಒಂಟಿ ಸಲಗ ಕಳೆದ ಆರೇಳು ವರ್ಷಗಳಿಂದ ನಿರಂತರವಾಗಿ ಇದೇ ಸಮಯದಲ್ಲಿ ಪೆರಾಜೆ ಗ್ರಾಮದ ಕೋಳಿಕಾ ಮಲೆ ಬೆಟ್ಟಕ್ಕೆ ಹೋಗಿ ಬರುತ್ತಿದ್ದು, ಒಂದು ವಾರದ ಬಳಿಕ ಮತ್ತೆ ಹಿಂತಿರುಗಿ ಹೋಗುತ್ತಿದೆ. ಈ ವರ್ಷವೂ ಬಂದಿರುವ ಆನೆ ಇದೇ ಎಂದು ಹೇಳಲಾಗಿದೆ, ಪ್ರತಿ ವರ್ಷ ಅಷ್ಟಾಗಿ ಯಾವುದೇ ಹಾನಿ ಮಾಡದ ಆನೆ ಈ ಬಾರಿ ಮಾತ್ರ ಕಾರಿಗೆ ಜಖಂ ಮಾಡಿದೆ.