ಕುಶಾಲನಗರ, ಜ. ೩೦: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿಯ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ನಡೆಯಿತು.
ಕುಶಾಲನಗರದ ಮಹಿಳಾ ಸಮಾಜ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಎಸ್.ಟಿ.ಎ. ಕೊಡಗು ಜಿಲ್ಲಾಧ್ಯಕ್ಷ ಶೇಖ್ ಅಹಮ್ಮದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎರಡು ದಶಕಗಳ ಹಿಂದೆ ಬೆರಳೆಣಿಕೆ ಸದಸ್ಯರಿಂದ ಆರಂಭವಾದ ಸಂಘಟನೆ ರಾಜ್ಯಾದ್ಯಂತ ವಿಸ್ತರಿಸಿದೆ. ಸಂಘಟನೆ ರಜತಮಹೋತ್ಸವ ಆಚರಣೆ ಸಿದ್ದವಾಗಿದ್ದರೂ ಕೂಡ ಇದುವರೆಗೆ ನಮ್ಮ ಬೇಡಿಕೆಗಳನ್ನು ಯಾವುದೇ ಸರಕಾರ ಈಡೇರಿಸಿಲ್ಲ.
ಆನ್ಲೈನ್ ವಹಿವಾಟುಗಳ ಕಾರಣದಿಂದ ಟೈಲರ್ಗಳಿಗೆ ಬೇಡಿಕೆ ಕ್ಷೀಣಿಸುತ್ತಿದೆ. ಸಂಘಟಿತರಾಗುವ ಮೂಲಕ ಟೈಲರ್ಸ್ ಬಾಂಧವರು ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕಿದೆ ಎಂದರು.
ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ನಂದೀಶ್ ಮಾತನಾಡಿ, ಗಣ್ಯ ವ್ಯಕ್ತಿಗಳ ವ್ಯಕ್ತಿತ್ವ ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಉಡುಪುಗಳನ್ನು ತಯಾರಿಸಿ ಕೊಡುವ ಟೈಲರ್ ಬಾಂಧವರು ಸ್ಥಿತಿಗತಿ ಉತ್ತಮವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ನಮ್ಮಲ್ಲಿ ಕೂಡ ಪೈಪೋಟಿ ಹೆಚ್ಚಾಗುತ್ತಿದೆ. ಟೈಲರಿಂಗ್ ಕ್ಷೇತ್ರದಲ್ಲಿನ ಸಮಸ್ಯೆಗಳ ಕಾರಣದಿಂದ ತಮ್ಮ ಮುಂದಿನ ಪೀಳಿಗೆಗೆ ಟೈಲರ್ ವೃತ್ತಿ ಹೊರತುಪಡಿಸಿ ಇತರೆ ಕ್ಷೇತ್ರಗಳನ್ನು ಅಯ್ದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದು ಯುವ ಸಮೂಹ ಕೂಡ ಇದರಿಂದ ದೂರವಾಗುತ್ತಿದೆ ಎಂದರು.
ಕುಶಾಲನಗರ ವಲಯ ಸಮಿತಿ ಅಧ್ಯಕ್ಷೆ ಭವಾನಿ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅಸೋಸಿಯೇಷನ್ ಬಗ್ಗೆ ಮಾಹಿತಿ ಪಡೆದು, ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭ ಸೋಮವಾರಪೇಟೆ ಸಮಿತಿ ಗೌರವಾಧ್ಯಕ್ಷ ಮಂಜುನಾಥ್ ಬಿ.ಎನ್, ಮಡಿಕೇರಿ ಸಮಿತಿ ಅಧ್ಯಕ್ಷ ಸಂಜೀವ, ಗೋಣಿಕೊಪ್ಪ ಸಮಿತಿ ಅಧ್ಯಕ್ಷೆ ಅಬಿಬುನ್ನಿಸಾ, ಭಾಗಮಂಡಲ ಸಮಿತಿ ಅಧ್ಯಕ್ಷ ನಾಗೇಂದ್ರ, ಮಡಿಕೇರಿ ಸಮಿತಿ ಅಧ್ಯಕ್ಷೆ ಜುಲೇಕಾಬಿ, ಮೂರ್ನಾಡು ಸಮಿತಿ ಅಧ್ಯಕ್ಷೆ ತುಳಸಿ, ಕುಶಾಲನಗರ ಸಮಿತಿ ಉಪಾಧ್ಯಕ್ಷ ನಾಗರಾಜು, ಖಜಾಂಚಿ ಫೈರೋಜ್ ಅಹಮ್ಮದ್, ಸಂಘಟನಾ ಕಾರ್ಯದರ್ಶಿ ಶಾರದಾ, ಜಯಂತ್, ಸಲಹೆಗಾರರಾದ ರೊನಾಲ್, ನಿಸಾರ್ ಅಹಮದ್, ಸದಸ್ಯರು ಇದ್ದರು.