ಪೊನ್ನಂಪೇಟೆ, ಜ. ೩೦: ಬುಡಕಟ್ಟು ಜನರು ತಮ್ಮಲ್ಲೇ ಸಿಗುವ ಆರ್ಕಿಡ್ ಸಸ್ಯಗಳನ್ನು ಸಂರಕ್ಷಿಸುವ ಮೂಲಕ ಆರ್ಥಿಕ ಆದಾಯ ಕಂಡುಕೊಳ್ಳಬಹುದು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಡೇಗೌಡ ಹೇಳಿದರು.
ಅರಣ್ಯ ಮಹಾವಿದ್ಯಾಲಯದ ಟಿ.ಎಸ್.ಪಿ. ವಿಶೇಷ ಅನುದಾನದಲ್ಲಿ ಬುಡಕಟ್ಟು ಜನರ ಆದಾಯ ವೃದ್ಧಿಗಾಗಿ ಆರ್ಕಿಡ್ ಬೇಸಾಯದ ಬಗ್ಗೆ ತರಬೇತಿ ನೀಡಿದ ಅವರು ಆರ್ಕಿಡ್ ಸಸ್ಯಗಳನ್ನು ಅರಣ್ಯ ಕಾಲೇಜಿನಿಂದ ನೀಡಲಾಗುವುದು. ಬುಡಕಟ್ಟು ಜನರು ಇವುಗಳನ್ನು ಮನೆಯ ಮುಂದೆ ಬೆಳೆದು ಹೂಗಳನ್ನು ಮಾರಾಟ ಮಾಡಿದರೆ ಉತ್ತಮ ಆದಾಯ ಸಿಗುತ್ತದೆ. ಆರ್ಕಿಡ್ನ ಒಂದು ಹೂವು ಸುಮಾರು ೩ ತಿಂಗಳವರೆಗೂ ಇರುತ್ತದೆ. ಒಂದು ಹೂವಿಗೆ ರೂ. ೭೦೦ ರವರೆಗೆ ಬೆಲೆ ಇದೆ ಎಂದರು. ಗಿರಿಜನರ ಮನೆಯ ಸುತ್ತಮುತ್ತ ಬಹಳಷ್ಟು ಜಾಗವಿದ್ದು, ಇದರಲ್ಲಿ ಹೂ ಕುಂಡ ಅಥವಾ ಮನೆಯ ಮುಂದೆ ಬೆಳೆಸಬಹುದು. ಗಿರಿಜನರು ಈ ಮೂಲಕ ಯಾವುದೇ ಖರ್ಚಿಲ್ಲದೆ ಉತ್ತಮ ಆದಾಯ ಕಂಡುಕೊಳ್ಳಬಹುದು. ಕೂಲಿ ಮಾಡುವುದರ ಜೊತೆ ಹೆಚ್ಚು ಆದಾಯ ತರುವ ಆರ್ಕಿಡ್ಗಳನ್ನು ಬೆಳೆಸುವ ಮೂಲಕ ಆದಾಯ ಕಂಡುಕೊಳ್ಳಬಹುದು. ತೋಟಗಾರಿಕೆ ಇಲಾಖೆ ವತಿಯಿಂದ ನೆರಳಿನ ನೆಟ್ ಮತ್ತು ಇತರ ಖರ್ಚು ವೆಚ್ಚಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮಾಯಮುಡಿಯಲ್ಲಿ ಚೆಪ್ಪುಡಿರ ಸುವಿನ್ ಸುಬ್ಬಯ್ಯ ಎಂಬವರು ೧೦ ವರ್ಷಗಳಿಂದ ಆರ್ಕಿಡ್ ಹೂ ಬೆಳೆಯುತ್ತಿದ್ದು, ಈ ಮೂಲಕ ೨೫ ರಿಂದ ೩೦ ಲಕ್ಷ ಆದಾಯಗಳಿಸಿದ್ದಾರೆ. ತಿತಿಮತಿಯಲ್ಲಿ ಗಿರಿಜನ ಮಹಿಳೆಯೊಬ್ಬರು ತಮ್ಮ ಮನೆಯ ಮುಂದೆ ಆರ್ಕಿಡ್ ಬೆಳೆದಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬುಡಕಟ್ಟು ಜನರ ಮುಖಂಡರಾದ ಜೆ.ಕೆ. ರಾಮು, ಜೆ.ಆರ್. ಇಂದಿರಾ ಪಾಲ್ಗೊಂಡಿದ್ದರು.