ಮಡಿಕೇರಿ, ಜ. ೨೯: ಮೈಸೂರಿನ ಬೋಗಾದಿ ರಸ್ತೆಯಲ್ಲಿ ಶನಿವಾರ ಸಂಜೆ ಏಕಾಏಕಿ ರಸ್ತೆಹುಬ್ಬು ನಿರ್ಮಿಸಲಾಗಿದ್ದು, ಇದರ ಅರಿವಿಲ್ಲದೆ ವಾಹನ ಚಲಾಯಿಸುತ್ತಿದ್ದ ಹಲವರು ಅವಘಡಕ್ಕೆ ಸಿಲುಕಿ ಗಾಯಗೊಂಡಿದ್ದಾರೆ. ಅವೈಜ್ಞಾನಿಕ ರಸ್ತೆಹುಬ್ಬು ನಿರ್ಮಾಣದಿಂದಾಗಿ ಕೇವಲ ೧೨ ಗಂಟೆಯಲ್ಲಿ ೨೦ಕ್ಕೂ ಅಧಿಕ ಅವಘಡಗಳು ಸಂಭವಿಸಿವೆ. ರಸ್ತೆ ಹುಬ್ಬಿನ ಕಾರಣದಿಂದಾಗಿ ಕೊಡಗಿನ ಯುವಕರೊಬ್ಬರು ಚಲಾಯಿಸುತ್ತಿದ್ದ ಬೈಕ್ ಕೂಡ ಅವಘಡಕ್ಕೀಡಾಗಿ ಯುವಕ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಿಲ್ಲೆಯ ಕಂಡAಗಾಲ ಗ್ರಾಮದ ನಿವಾಸಿ ಮೈಸೂರಿನಲ್ಲಿ ಉದ್ಯೋಗದಲ್ಲಿರುವ ಬಲ್ಲಡಿಚಂಡ ಶಿವನ್ (೨೩) ಎಂಬವರು ಗಾಯಗೊಂಡಿರುವ ಯುವಕರಾಗಿದ್ದಾರೆ. ಬೋಗಾದಿ ರಸ್ತೆಯ ಕುವೆಂಪು ಪ್ರತಿಮೆ ಸನಿಹ ಶನಿವಾರ ರಾತ್ರಿ ರಸ್ತೆ ಹುಬ್ಬು ನಿರ್ಮಿಸಿದ್ದು, ಇದಕ್ಕೆ ಬಣ್ಣ ಬಳಿದಿರಲಿಲ್ಲ. ಈ ಬಗ್ಗೆ ಮಾಹಿತಿಯಿಲ್ಲದೆ ಸಹಜವಾಗಿ ವಾಹನ ಚಲಾಯಿಸುತ್ತಿದ್ದ ಹಲವರು ಅವಘಡಕ್ಕೀಡಾಗಿದ್ದಾರೆ. ಇವರಲ್ಲಿ ಶಿವನ್ ಕೂಡ ಒಬ್ಬರಾಗಿದ್ದಾರೆ. ರಸ್ತೆ ಹುಬ್ಬಿಗೆ ಶಿವನ್ ಚಲಾಯಿಸುತ್ತಿದ್ದ ಬೈಕ್ ಅಪ್ಪಳಿಸಿದ್ದು, ಇವರು ರಸ್ತೆಗೆ ಹಾರಿ ಬಿದ್ದಿದ್ದಾರೆ. ಘಟನೆಯಿಂದ ಇವರಿಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಅಲ್ಲಿನ ಕಾಮಾಕ್ಷಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಈ ರೀತಿ ಗಾಯಗೊಂಡಿರುವ ಹಲವರು ದಾಖಲಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಶಿವನ್ ಅವರ ತಾಯಿ ಗೀತಾ ಕುವೆಂಪುನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅವಘಡದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆಡಳಿತ ಭಾನುವಾರ ರಾತ್ರಿ ರಸ್ತೆ ಹುಬ್ಬಿಗೆ ಬಣ್ಣ ಬಳಿದಿರುವುದಾಗಿ ಹೇಳಲಾಗಿದೆ. ಆದರೆ ಯಾವುದೇ ಮಾಹಿತಿ ಇಲ್ಲದೇ ರಸ್ತೆ ಹುಬ್ಬನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ಪರಿಣಾಮ ಗಾಯಗೊಂಡಿರುವವರ ಬಗ್ಗೆ ಚಿಂತಿಸುವವರಾರು ಎಂಬುದು ಪ್ರಶ್ನೆಯಾಗಿದೆ.