(ಅAಚೆಮನೆ ಸುಧಿ)
*ಸಿದ್ದಾಪುರ, ಜ. ೨೮: ವಸತಿ ಯೋಜನೆಯ ಹಣಕ್ಕಾಗಿ ತಾತ್ಕಾಲಿಕ ಅಡಿಪಾಯ ನಿರ್ಮಿಸಿ ಫೋಟೋ ತೆಗೆಸಿಕೊಂಡು ಹಣ ಕೈ ಸೇರಿದ ನಂತರ ಅಡಿಪಾಯವನ್ನು ತೆರವು ಮಾಡಿದ ಪ್ರಕರಣ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಗುಹ್ಯ ಗ್ರಾಮದ ವಾರ್ಡ್ ಸಂಖ್ಯೆ ೨ರ ನೇತಾಜಿ ನಗರದಲ್ಲಿ ನಡೆದಿದೆ.
ಸ್ವತ: ಗ್ರಾ.ಪಂ ಅಧ್ಯಕ್ಷೆ ಪ್ರೇಮ ಗೋಪಾಲ ಅವರೇ ಈ ನಿಯಮ ಉಲ್ಲಂಘನೆಯ ಅರ್ಜಿದಾರರಾಗಿದ್ದಾರೆ. ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ವಸತಿ ಯೋಜನೆಯಡಿ ಫಲಾನುಭವಿಗೆ ೨ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಈ ಹಣವನ್ನು ಅಡಿಪಾಯ, ಗೋಡೆ ಮತ್ತು ಮೇಲ್ಚಾವಣಿ ನಿರ್ಮಾಣ ಈ ಮೂರು ಹಂತಗಳಲ್ಲಿ ನೀಡಲಾಗುತ್ತದೆ.
ಮೊದಲ ಹಂತದ ಅನುದಾನಕ್ಕಾಗಿ ಅಧ್ಯಕ್ಷೆ ಪ್ರೇಮ ಗೋಪಾಲ ಅವರು ಅರ್ಜಿ ಸಲ್ಲಿಸಿದ್ದರು. ಹಣಕ್ಕಾಗಿ ಇಟ್ಟಿಗೆಯಿಂದ ಅಡಿಪಾಯ ನಿರ್ಮಿಸಿದಂತೆ ಮಾಡಿ ಅದರ ಎದುರು ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಪರಿಶೀಲಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ೨೮,೯೯೯ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಈ ಹಣ ಪ್ರೇಮ ಗೋಪಾಲ ಅವರ ಖಾತೆಗೆ ಸೇರಿದೆ. ಹಣ ಬಂದಾಕ್ಷಣ ತಾತ್ಕಾಲಿಕವಾಗಿ ನಿರ್ಮಿಸಿದ್ದ ಅಡಿಪಾಯವನ್ನು ತೆರವುಗೊಳಿಸಲು ಆರಂಭಿಸಿದ್ದಾರೆ.
ಇದನ್ನು ಗಮನಿಸಿದ ಗ್ರಾ.ಪಂ ನ ಕೆಲವು ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ನಿಯಮ ಉಲ್ಲಂಘನೆ ಮತ್ತು ಹಣ ದುರುಪಯೋಗದ ಸಂಶಯ ವ್ಯಕ್ತಪಡಿಸಿದ್ದರು. ಅಲ್ಲದೆ ಅನುದಾನ ಮಂಜೂರಾತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು. ಜಿ.ಪಂ ಮತ್ತು ತಾ.ಪಂ ಗೆ ದೂರು ನೀಡುವ ಎಚ್ಚರಿಕೆಯನ್ನೂ ನೀಡಿದರು. ಸ್ಥಳಕ್ಕೆ ತೆರಳಿದ ಪತ್ರಕರ್ತರು ತಾತ್ಕಾಲಿಕವಾಗಿ ನಿರ್ಮಿಸಿದ ಅಡಿಪಾಯದ ಫೋಟೋಗಳನ್ನು ತೆಗೆದುಕೊಂಡಿದ್ದರು.
ಇದರಿAದ ಎಚ್ಚೆತ್ತುಕೊಂಡ ಅಧ್ಯಕ್ಷೆ ಪ್ರೇಮ ಗೋಪಾಲ ಇದೀಗ ತರಾತುರಿಯಲ್ಲಿ ಅಡಿಪಾಯದ ಗುಂಡಿ ತೆಗೆಸುತ್ತಿರುವ ದೃಶ್ಯ ಕಂಡು ಬಂದಿದೆ. ಇದು ಸಂಪೂರ್ಣ ನಿಯಮ ಉಲ್ಲಂಘನೆ ಮತ್ತು ಅಧಿಕಾರದ ದುರುಪಯೋಗವೆಂದು ಸದಸ್ಯರು ಆರೋಪಿಸಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಹಲವು ಗ್ರಾಮಸ್ಥರಿಗೆ ಹಣ ಮಂಜೂರಾಗಿಲ್ಲ, ಆದರೆ ನಿಯಮ ಉಲ್ಲಂಘಿಸಿದ ಅಧ್ಯಕ್ಷರಿಗೆ ಹಣ ಮಂಜೂರಾಗಿದೆ. ಆದ್ದರಿಂದ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.