ಚೆಟ್ಟಳ್ಳಿ, ಜ. ೨೮: ಬೈತೂರು ಉತ್ಸವ ಹಿನ್ನೆಲೆ, ದಕ್ಷಿಣ ಕೊಡಗಿನ ವೀರಾಜಪೇಟೆಯಿಂದ ಕೇರಳದ ಬೈತೂರಪ್ಪ ದೇವಸ್ಥಾನಕ್ಕೆ ಇಬ್ಬರು ಕೊಡವ ಯುವಕರಾದ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸವನ್ ಸೋಮಣ್ಣ ಪಾದಯಾತ್ರೆ ನಡೆಸಿದರು. ಶರತ್ ಹಾಗೂ ಸವನ್ ಮಂಗಳವಾರ ಬೆಳಿಗ್ಗೆ ೬ ಗಂಟೆಗೆ ವೀರಾಜಪೇಟೆಯ ಗಣಪತಿ ದೇವಾಲಯದಲ್ಲಿ ಈಡುಗಾಯಿ ಒಡೆಯುವ ಮೂಲಕ ಪಾದಯಾತ್ರೆ ಪ್ರಾರಂಭಿಸಿ ವೀರಾಜಪೇಟೆ, ಪೆರುಂಬಾಡಿ, ಮಾಕುಟ್ಟ, ಕೂಟುಪೊಳೆ, ಹುಲಿಕಲ್ ಮೂಲಕ ಪಾದಯಾತ್ರೆ ನಡೆಸಿ ಮಧ್ಯಾಹ್ನ ೨.೩೫ ಗಂಟೆಗೆ ಸುಮಾರು ೪೦ ಕಿ.ಮೀ. ಕ್ರಮಿಸಿ ಬೈತೂರು ದೇವಸ್ಥಾನ ತಲುಪಿದರು. ನಂತರ ಮೂರು ದಿನ ಅಲ್ಲಿಯೇ ತಂಗಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ, ಗುರುವಾರ ವೀರಾಜಪೇಟೆಗೆ ಹಿಂತಿರುಗಿ ದೇವಸ್ಥಾನದಿಂದ ತಂದ ಪ್ರಸಾದವನ್ನು ಹಲವೆಡೆ ವಿತರಿಸಿದರು.