ಗೋಣಿಕೊಪ್ಪಲು, ಜ. ೨೭: ಹಲವು ದಶಕಗಳಿಂದ ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದ ಗಿರಿಜನರಿಗೆ ಸಮುದಾಯದ ಹಕ್ಕುಪತ್ರ ಲಭಿಸಿದೆ. ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕು ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಆಗಮಿಸಿದ್ದ ಸಂದರ್ಭ ನೂರು ಕುಟುಂಬಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಹಕ್ಕುಪತ್ರಗಳನ್ನು ವಿತರಿಸಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಿರಿಜನರಿಗೆ ಸಂವಿಧಾನಾತ್ಮಕವಾಗಿ ಲಭಿಸಬೇಕಾದ ಸಮುದಾಯ ಹಕ್ಕು ಪತ್ರ ನೀಡುವಂತೆ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಿದ್ದರು. ಅಲ್ಲದೆ ಗಿರಿಜನರ ಮುಖಂಡರ ಸಭೆಯಲ್ಲಿ ಈ ಬಗ್ಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಅರಣ್ಯ ಸಂರಕ್ಷಣಾ ಕಾಯ್ದೆ ೨೦೦೬ ತಿದ್ದುಪಡಿ ೨೦೧೨ರ ಅಡಿಯಲ್ಲಿ ಅರಣ್ಯದಲ್ಲಿ ವಾಸವಿರುವ ವೈಯಕ್ತಿಕ ಹಕ್ಕುಗಳನ್ನು ಹೊಂದಿರುವ ಪರಿಶಿಷ್ಟ ವರ್ಗಗಳ ಅರಣ್ಯವಾಸಿಗಳಿಗೆ ಕಿರು ಉತ್ಪನ್ನಗಳನ್ನು ಅರಣ್ಯದಿಂದ ಸಂಗ್ರಹಿಸಿ ತಮ್ಮ ಆರ್ಥಿಕ ಅಭಿವೃದ್ಧಿ ಹೊಂದುವ ಸಲುವಾಗಿ ಸಮುದಾಯ ಹಕ್ಕುಗಳನ್ನು ನೀಡಲು ಕಾಯ್ದೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಗಿರಿಜನರು ಸಮುದಾಯದ ಹಕ್ಕು ನೀಡುವಂತೆ ಆಗಿಂದ್ದಾಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಲೇ ಬಂದಿದ್ದರು. ಆದರೂ ಹಲವು ಸಮಸ್ಯೆಗಳಿಂದ ಸಮುದಾಯದ ಹಕ್ಕು ಲಭಿಸಿರಲಿಲ್ಲ.

ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕೆಮಾಳ ಹಾಡಿಯಲ್ಲಿ ವಾಸಿಸುವ ವೈಯಕ್ತಿಕ ಹಕ್ಕುಗಳನ್ನು ಹೊಂದಿರುವ ೫೦ ಗಿರಿಜನ ಕುಟುಂಬಗಳು ಹಾಗೂ ಬೇಟೋಳಿ ಪಂಚಾಯಿತಿಯ ಮಾಕುಟ್ಟ ಹಾಡಿಯಲ್ಲಿ ವಾಸಿಸುವ ೫೦ ಕುಟುಂಬಗಳಿಗೆ ಸಮುದಾಯದ ಹಕ್ಕು ಪತ್ರಗಳನ್ನು ನೀಡುವಲ್ಲಿ ಶಾಸಕ ಪೊನ್ನಣ್ಣ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ನೂರಾರು ಹಾಡಿಗಳಲ್ಲಿ ಆದಿವಾಸಿ ಗಿರಿಜನರು ವಾಸವಾಗಿದ್ದಾರೆ. ಇಲಾಖೆಯ ಸೂಚನೆಯಂತೆ ೨೮ ಭಾಗಗಳಲ್ಲಿ ಸಮುದಾಯದ ಅರಣ್ಯ ಹಕ್ಕುಗಳನ್ನು ನೀಡಬೇಕಾಗಿದೆ. ಈಗಾಗಲೇ ೭ ಪ್ರಮುಖ ಸ್ಥಳಗಳಲ್ಲಿ ಗಿರಿಜನರ ಸಮುದಾಯ ಹಕ್ಕುಗಳನ್ನು ನೀಡಲಾಗಿದೆ. ಉಳಿದಂತೆ ೨೧ ಭಾಗದಲ್ಲಿ ಸಮುದಾಯದ ಹಕ್ಕುಗಳನ್ನು ಗಿರಿಜನರಿಗೆ ನೀಡಬೇಕಾಗಿದೆ. ಸಮುದಾಯದ ಅರಣ್ಯ ಹಕ್ಕುಗಳನ್ನು ನೀಡಿರುವುದರಿಂದ ಇಂತಹ ಪ್ರದೇಶಗಳಲ್ಲಿ ಗಿರಿಜನರಿಗೆ ಅಗತ್ಯವಿರುವ ವಿದ್ಯುತ್, ಕುಡಿಯುವ ನೀರು, ಶಾಲೆ, ಅಂಗನವಾಡಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮುದಾಯ ಅರಣ್ಯ ಹಕ್ಕುಗಳಲ್ಲಿ ಅವಕಾಶವಿದೆ. ಇದರಿಂದ ಈ ಭಾಗದ ಆದಿವಾಸಿಗಳ ಸಮಸ್ಯೆ ಈಡೇರಿದಂತಾಗಿದೆ.

-ಹೆಚ್.ಕೆ.ಜಗದೀಶ್