ಗೋಣಿಕೊಪ್ಪಲು, ಜ. ೨೭: ಚುನಾವಣೆ ಸಂದರ್ಭ ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಗ್ರಾ.ಪಂ. ಸದಸ್ಯೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯೆ ಈ ವಿಚಾರದಲ್ಲಿ ತನಗೆ ಆಮಿಷ ಒಡ್ಡಿರುವ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾಧಿಕಾರಿ ಲಿಖಿತವಾಗಿ ದೂರು ನೀಡಿದ್ದಾರೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವಿಚಾರದ ಚುನಾವಣೆಯು ತಾ.೨೯ರಂದು ನಡೆಯಲಿದೆ. ಅಧ್ಯಕ್ಷಗಾದಿಯು ಸಾಮಾನ್ಯ ಹಾಗೂ ಉಪಾಧ್ಯಕ್ಷ ಹುದ್ದೆಯು ಬಿಸಿಎಂ(ಎ) ಮಹಿಳೆಗೆ ಮೀಸಲಾಗಿದೆ. ಬಿಜೆಪಿ ಬೆಂಬಲಿತ ೧೨ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ ೯ ಸದಸ್ಯರಿದ್ದು, ಗ್ರಾಮ ಪಂಚಾಯಿತಿ ಪಿಡಿಓ ತಿಮ್ಮಯ್ಯ ೨ನೇ ವಿಭಾಗದಲ್ಲಿ ಆರಿಸಿ ಬಂದಿರುವ ಗ್ರಾಮ ಪಂಚಾಯಿತಿ ಸದಸ್ಯೆ ಜಿ.ಕೆ. ಗೀತಾ ಅವರಿಗೆ ನಾನು ಹೇಳುವ ಅಭ್ಯರ್ಥಿಗೆ ಮತ ನೀಡಿದರೆ ಹಣ, ನಿವೇಶನ, ಮನೆ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ನಿಗದಿಯಾಗಿರುವ ದಿನಾಂಕದAದು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಸಲುವಾಗಿ ಪಿಡಿಓ ಅವರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಪಿ.ಡಿ.ಓ. ಪ್ರತಿಕ್ರಿಯೆ: ಚುನಾವಣಾ ವಿಚಾರದಲ್ಲಿ ನಾನು ಯಾರಿಗೂ ಆಮಿಷ ಒಡ್ಡುವ ಕೆಲಸ ನಿರ್ವಹಿಸಿರುವುದಿಲ್ಲ. ಇದು ನಿರಾಧಾರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೊ ತುಣುಕು ನನಗೆ ಸಂಬAಧಿಸಿದ್ದಲ್ಲ. ತಾ.೨೨ರಂದು ಗ್ರಾಮ ಪಂಚಾಯಿತಿ ಸದಸ್ಯೆ ಜಿ.ಕೆ. ಗೀತಾ ನನ್ನ ಮೊಬೈಲ್ ನÀಂಬರ್ಗೆ ಕರೆ ಮಾಡಿ ನಿಮ್ಮೊಂದಿಗೆ ಮಾತನಾಡಬೇಕಿದೆ ಎಂದಿದ್ದಾರೆ. ನಾನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಲಭ್ಯ ಇರುವುದಾಗಿ ತಿಳಿಸಿರುತ್ತೇನೆ. ಕಚೇರಿಗೆ ಆಗಮಿಸಿದ ಬಳಿಕ ಅವರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೇಕಾದ ನೋಟೀಸನ್ನು ನೀಡಿರುತ್ತೇನೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಂಭಾಷಣೆಗಳು ನಡೆದಿಲ್ಲ ಎಂದು ಪಿಡಿಓ ತಿಮ್ಮಯ್ಯ ಪ್ರತಿಕ್ರಿಯಿಸಿದ್ದಾರೆ.
ಗೀತಾ ಹೇಳಿಕೆ: ಗ್ರಾಮ ಪಂಚಾಯಿತಿ ಪಿಡಿಓ ತಿಮ್ಮಯ್ಯ ಅವರು ಹಣ ನಿವೇಶನದ ಬಗ್ಗೆ ಆಮಿಷ ಒಡ್ಡಿದ್ದಾರೆ. ತಾನು ಹೇಳುವ ಅಭ್ಯರ್ಥಿಗೆ ಮತ ಚಲಾವಣೆ ಮಾಡಬೇಕು. ನಿಮ್ಮ ಎಲ್ಲ ಕೆಲಸಗಳನ್ನು ಮಾಡಿಕೊಡುತ್ತೇನೆ. ನನ್ನ ಮಾತು ಮೀರಿದರೆ ಮುಂದೆ ನಿಮಗೆ ತೊಂದರೆ ಆಗುತ್ತದೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ನಾನು ವಾಯ್ಸ್ ರೆಕಾರ್ಡ್ ಇಟ್ಟಿರುತ್ತೇನೆ. ಚುನಾವಣಾ ವಿಷಯದಲ್ಲಿ ನನಗೆ ಬೆದರಿಕೆ ಒಡ್ಡಿದ್ದಾರೆ. ಭಯದ ವಾತಾವರಣ ಉಂಟು ಮಾಡಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುತ್ತೇನೆ ಎಂದು ಸದಸ್ಯೆ ಜಿ.ಕೆ. ಗೀತಾ ಹೇಳಿದ್ದಾರೆ.