ಚೆಯ್ಯಂಡಾಣೆ, ಜ. ೨೫. ಮುಸಲ್ಮಾನರು ಶಿಕ್ಷಣ ಕ್ಷೇತ್ರದಿಂದ ವಂಚಿತರಾಗುತ್ತಿದ್ದು ಮುಂದೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಾಪೋಕ್ಲು ಬಳಿಯ ಕೊಟ್ಟಮುಡಿ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿದ ಮರ್ಕಜ್ ಹಲೀಮ ಅಲ್ ಕಿಂದಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ವಸತಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೂರಾರು ವರ್ಷಗಳ ಕಾಲ ಅಲ್ಪಸಂಖ್ಯಾತ ಜನ ಶಿಕ್ಷಣದಿಂದ ವಂಚಿತರಾದರು. ಹಾಗಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ಕಾಡುತ್ತಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶದ ಶಿಕ್ಷಣ ಕಲ್ಪಿಸಬೇಕು. ಎಲ್ಲರಿಗೂ ಸಾಮಾಜಿಕ ಆರ್ಥಿಕ ಶಕ್ತಿಯನ್ನು ತುಂಬಿದರೆ ಮಾತ್ರ ಅಸಮಾನತೆಯನ್ನು ಸಮಾಜದಿಂದ ತೊಲಗಿಸಲು ಸಾಧ್ಯ ಎಂದರು. ನಾವು ಎಲ್ಲಾ ಜಾತಿ, ಭಾಷೆ ಧರ್ಮದವರನ್ನು ಸಮಾನವಾಗಿ, ಸ್ವಾಭಿಮಾನದಿಂದ, ಬದ್ಧತೆಯಿಂದ ಕಾಣುವಂತವರು. ನಾವು ಯಾವುದೇ ಜಾತಿ, ಧರ್ಮ, ಭಾಷೆಯ ಪರವಾಗಿ ಇರುವವರಲ್ಲ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಿದ್ಧಾಂತದವರು. ಎಲ್ಲರನ್ನೂ ಪ್ರೀತಿಸಿ ಯಾರನ್ನೂ ದ್ವೇಷಿಸಬೇಡ ಎಂಬುದೇ ನಮ್ಮ ಆಶಯ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ಮಾತನಾಡಿ ಸುಲ್ತಾನುಲ್ ಉಲಾಮಾ ಅಬೂಬಕ್ಕರ್ ಮುಸ್ಲಿಯಾರ್ ಕೊಡಗಿನಲ್ಲಿ ಅಲ್ಪಸಂಖ್ಯಾತರು ಹೆಚ್ಚಿರುವ ಈ ಪ್ರದೇಶವನ್ನು ಆಯ್ಕೆಮಾಡಿ

(ಮೊದಲ ಪುಟದಿಂದ) ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಇಸ್ಲಾಂ ಕೂಡ ಶಿಕ್ಷಣಕ್ಕೆ ಅತ್ಯಂತ ಹೆಚ್ಚು ಮಹತ್ವ ಕೊಟ್ಟಂತಹ ಧರ್ಮವಾಗಿದೆ. ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗಿದ್ದು ಶಿಕ್ಷಣ. ಇದೀಗ ಈ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಿರುವುದು ಸಂತಸದ ವಿಚಾರ. ಈ ನಿಟ್ಟಿನಲ್ಲಿ ಗಮನಹರಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಶಿಕ್ಷಣವನ್ನು ನೀಡಬೇಕಾಗಿದೆ ಎಂದರು.

ಪೊ. ಡಾ. ಮುಜಾಫರ್ ಅಸಾದಿ, ಮಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕÀ ಡಾ. ಜೈ ಶಂಕರ್, ಎಸ್‌ವೈಎಸ್ ಮಾಜಿ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಗೃಹ ಸಚಿವ ಜಿ. ಪರಮೇಶ್ವರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ವಕೀಲ ಅಬ್ದುಲ್ಲಾ, ಕೊಡಗು ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಲತೀಫ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ಗ್ರಾ.ಪಂ. ಸದಸ್ಯ ಮೊಯ್ದು ಕೊಟ್ಟಮುಡಿ, ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಯೂಸುಫ್ ಕೊಂಡAಗೇರಿ, ಮೈಸಿ ಕತ್ತಣಿರ, ಕೊಡಗು ಜಮಿಯತುಲ್ ಉಲಮ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ಹಮೀದ್ ಕಬಡಕೇರಿ, ಮೊಯಿದ್ದೀನ್ ಕುಟ್ಟಿ ಹಾಜಿ, ನಾಸರ್ ಮಕ್ಕಿ, ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ರಾಜಕೀಯ ಮುಖಂಡರು, ಅಪಾರ ಸಂಖ್ಯೆಯ ಸುನ್ನೀ ಕಾರ್ಯಕರ್ತರು ಇದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸಯ್ಯದ್ ಶಿಯಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರ್ ತಂಗಳ್ ನಿರ್ವಹಿಸಿ, ನಿರೂಪಣೆಯನ್ನು ಅಬ್ದುಲ್ಲ ಹಿಮಾಮಿ, ಸ್ವಾಗತವನ್ನು ಮರ್ಕಜ್ ಹುಲ್ ಹಿದಾಯ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ ನಡೆಸಿದರೆ, ಮೊಹಮ್ಮದ್ ಹಾಜಿ ಕುಂಜಿಲ ವಂದಿಸಿದರು. -ಅಶ್ರಫ್