ನಾಪೋಕ್ಲು, ಜ. ೨೬: ವೆಸ್ಟ್ ಕೊಳಕೇರಿ ಗ್ರಾಮದಲ್ಲಿ ಕಾಡು ಹಂದಿಗಳ ಉಪಟಳ ವಿಪರೀತವಾಗಿದ್ದು ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ತಡವಾಗಿ ಭತ್ತ ಕೊಯ್ಲು ಮಾಡಲು ಹೊರಟ ಬೆಳೆಗಾರರಿಗೆ ಏನೂ ದಕ್ಕದ ಪರಿಸ್ಥಿತಿ ನಿರ್ಮಾಣವಾಗಿ ಭಾರೀ ನಷ್ಟ ಸಂಭವಿಸಿ ಚಿಂತೆಗೀಡಾಗಿದ್ದಾರೆ.
ಇಲ್ಲಿಗೆ ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದ ನಿವಾಸಿ ಕಲಿಯಂಡ ದರ್ಶನ್ ಅಯ್ಯಪ್ಪ ಅವರ ಗದ್ದೆಗೆ ಕಾಡು ಹಂದಿಗಳು ದಿನಂಪ್ರತಿ ಗುಂಪು ಗುಂಪಾಗಿ ದಾಳಿ ಮಾಡಿ ಪೈರುಗಳನ್ನು ನಾಶಪಡಿಸಿವೆ. ಸುಮಾರು ಒಂದು ಎಕರೆಯಷ್ಟು ಕೃಷಿ ಭೂಮಿ ಕಾಡು ಹಂದಿಗಳ ದಾಳಿಗೆ ತುತ್ತಾಗಿ ಇಳುವರಿ ಹೋಗಲಿ ಹುಲ್ಲು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕ ಇಳುವರಿ ನೀಡಬಲ್ಲ ತಮಿಳುನಾಡಿನ ನಾಟಿ ಭತ್ತದ ತಳಿಯನ್ನು ಬಿತ್ತಿದ್ದರು. ಅಧಿಕ ಮಳೆಯಿಂದಾಗಿ ಆಗಸ್ಟ್ ತಿಂಗಳಲ್ಲಿ ಡ್ರಮ್ ಸೀಡ್ ಪದ್ಧತಿಯಲ್ಲಿ ವ್ಯವಸ್ಥಿತವಾಗಿ ನಾಟಿ ಕೈಗೊಳ್ಳಲಾಗಿತ್ತು . ಇದೀಗ ಬೆಳೆ ಕಟಾವ್ ಮಾಡುವ ಅವಧಿಯಾಗಿದ್ದು, ಕಾಡು ಹಂದಿಗಳ ಉಪಟಳದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ದಕ್ಕದಂತಾಗಿದೆ.
ಈ ಹಿಂದೆ ಕೊಡಗು ಭತ್ತದ ಕಣಜ ವೆಂದೇ ಪ್ರಖ್ಯಾತಿ ಪಡೆದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹವಮಾನ ವೈಪರೀತ್ಯ ಹಾಗೂ ಕಾಡು ಪ್ರಾಣಿಗಳ ಉಪಟಳ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಬಹುತೇಕ ಫಲವತ್ತಾದ ಗದ್ದೆಗಳು ಬಂಜರು ಬಿದ್ದಿದೆ. ಇದೀಗ ಬೆರಳೆಣಿಕೆಯ ರೈತರು ಕಷ್ಟಪಟ್ಟು ಬೇಸಾಯ ಮಾಡಿ ಭತ್ತ ಬೆಳೆದರೂ ಧಾನ್ಯ ದಕ್ಕದೆ ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ಸರಕಾರ ಸೂಕ್ತ ಪರಿಹಾರ ಹಾಗೂ ಸಹಕಾರ ನೀಡಿ ಪ್ರೋತ್ಸಾಹಿಸಬೇಕೆಂದು ಇಲ್ಲಿಯ ಬೇಸಾಯಗಾರರು ಒತ್ತಾಯಪಡಿಸಿದ್ದಾರೆ.