ಮಡಿಕೇರಿ, ಜ. ೨೫: ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊಡಗು ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಆಯೋಜಿಸಲಾಗಿದ್ದು, ತಾ. ೨೬ ರಿಂದ ೨೮ರವರೆಗೆ ಮರಗೋಡಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಹಿಂದೂ ಮಲಯಾಳಿ ಫುಟ್ಬಾಲ್ ಆಟಗಾರರನ್ನು ಒಗ್ಗೂಡಿಸಲು ಹಾಗೂ ಅವರಿಗೆ ಸೂಕ್ತ ವೇದಿಕೆ ಒದಗಿಸಲು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ದರ್ಶನ್ ಸುಕುಮಾರ್, ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಪ್ರಾರಂಭಿಸಿದ್ದು, ಹಿಂದೂ ಮಲಯಾಳಿ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
೮ ತಂಡಗಳು - ೭೨ ಆಟಗಾರರು
ಮೊದಲ ಬಾರಿಗೆ ನಡೆಯುತ್ತಿರುವ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಸೂಪರ್ ಸೆವನ್ಸ್ ಮಾದರಿಯಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿನ ಸಮಾಜದ ಬಾಂಧವರು ಪ್ರಾಂಚೈಸಿ ಖರೀದಿಸಿ ಆಟಗಾರರನ್ನು ತಂಡಕ್ಕೆ ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಿದ್ದಾರೆ. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಜಿಲ್ಲೆಯ ೭೨ ಹಿಂದೂ ಮಲಯಾಳಿ ಫುಟ್ಬಾಲ್ ಆಟಗಾರರು ಭಾಗವಹಿಸಲಿದ್ದಾರೆ. ಮಲಯಾಳಿ ಕಪ್ ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ಹಿಂದೂ ಮಲಯಾಳಿ ಫುಟ್ಬಾಲ್ ಕ್ಲಬ್ ಮರಗೋಡು, ಕಾರ್ಗಿಲ್ ಎಫ್.ಸಿ ಕೊಡಗು, ಚಾಮುಂಡೇಶ್ವರಿ ಫ್ರೆಂಡ್ಸ್ ಅರೆಕಾಡು, ಜೈ ಶ್ರೀರಾಮ್ ಮಲಯಾಳಿ ಸಮಾಜ ಅಮ್ಮತ್ತಿ, ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ, ಶ್ರೀನಿತಿ ಎಫ್.ಸಿ ಒಂಟಿಯAಗಡಿ, ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ವೀರಾಜಪೇಟೆ ಹಾಗೂ ಗೋಣಿಕೊಪ್ಪ ಎಫ್.ಸಿ ತಂಡಗಳು ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಸೀಸನ್ -೧ ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಎಂಟು ಐಕಾನ್ ಆಟಗಾರರು
ಎಂಟು ಫ್ರಾಂಚೈಸಿಗಳು ತಲಾ ಒಂದು ಐಕಾನ್ ಆಟಗಾರರನ್ನು ಬಿಡ್ಡಿಂಗ್ ಮೂಲಕ ತಮ್ಮ ತಂಡಕ್ಕೆ ಖರೀದಿಸಿದ್ದಾರೆ. ಐಕಾನ್ ಪಟ್ಟಿಯಲ್ಲಿ ಕೊಡಗಿನ ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದವರು ಇದ್ದಾರೆ. ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಆಡಿ ಅನುಭವ ಇರುವ ಆಟಗಾರರು ಐಕಾನ್ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದಾರೆ. ಐಕಾನ್ ಆಟಗಾರರಾಗಿ ಕೊಡಗು ಎಫ್.ಸಿ ತಂಡವನ್ನು ಸೂಪರ್ ಡಿವಿಷನ್ನಲ್ಲಿ ಪ್ರತಿನಿಧಿಸಿದ ಅಮ್ಮತ್ತಿಯ ವಿಜು, ಆಲ್ ಇಂಡಿಯಾ ವಿವಿ ಆಟಗಾರ ಚೆಟ್ಟಳ್ಳಿಯ ಅಜಿತ್, ವಿವಿ ಆಟಗಾರ ಅಮ್ಮತ್ತಿ ಒಂಟಿಯAಗಡಿಯ ಶರತ್ (ಕಣ್ಣನ್), ಅನಿಲ್, ಸುನಿಲ್, ನೆಹರು ಎಫ್.ಸಿ ತಂಡದ ಡಿಫೆಂಡರ್ ಅಭಿ ಪಾಲಿಬೆಟ್ಟ, ವೈಷ್ಣವಿ ಮರಗೋಡು ತಂಡದಲ್ಲಿ ಆಡುತ್ತಿರುವ ವಿನು ಟಿ.ಸಿ ಹಾಗೂ ವೀರಾಜಪೇಟೆಯ ಸಿಸಿಬಿ ತಂಡದ ಆಟಗಾರ ಅನೀಶ್ ಐಕಾನ್ ಆಟಗಾರರಾಗಿದ್ದಾರೆ.
ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯದಲ್ಲಿ ಎಂಟು ತಂಡಗಳನ್ನು ತಲಾ ಎರಡು ಗುಂಪುಗಳಾಗಿ ವಿಂಗಡಿಸಿದ್ದು ಎರಡು ಗ್ರೂಪ್ನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ ಹಂತಕ್ಕೆ ಅರ್ಹತೆ ಪಡೆಯಲಿದೆ. ಮೊದಲ ಸ್ಥಾನ ಪಡೆಯುವ ತಂಡಕ್ಕೆ ೫೦ ಸಾವಿರ ರೂ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೩೦ ಸಾವಿರ ರೂ ನಗದು ಹಾಗೂ ಟ್ರೋಫಿ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.