ಸಿದ್ದಾಪುರ, ಜ. ೨೫: ಆಟೋ ರಿಕ್ಷಾ ಒಂದರ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಆಟೋರಿಕ್ಷಾ ಸಂಪೂರ್ಣ ಜಖಂಗೊAಡಿದ್ದು ಅದೃಷ್ಟ ವಶಾತ್ ಪ್ರಾಣಾಪಾ ಯದಿಂದ ಚಾಲಕ ಪಾರಾದ ಘಟನೆ ಕರಡಿ ಗೋಡು ಗ್ರಾಮದಲ್ಲಿ ಸಂಜೆ ಸಂಭವಿಸಿದೆ.

ಸಿದ್ದಾಪುರದ ಆಟೋ ಚಾಲಕ ಜೋರ್ಡಿನ್ ಜಾರ್ಜ್ ಎಂಬವರು ತನ್ನ ಆಟೋರಿಕ್ಷಾದಲ್ಲಿ (ಕೆ.ಎ. ೧೨ ಬಿ. ೧೧೪೪) ಸಿದ್ದಾಪುರ ದಿಂದ ಕರಡಿಗೋಡು ಗ್ರಾಮದ ಟೀಕ್‌ವುಡ್, ಕಾಫಿ ತೋಟದ ಲೈನ್ ಮನೆಗೆ ಸಾಮಗ್ರಿ ತಲುಪಿಸಿ ಹಿಂತಿರುಗಿ ಸಿದ್ದಾಪುರಕ್ಕೆ ಬರುತ್ತಿರುವ ಸಂದರ್ಭದಲ್ಲಿ ಕಾಫಿತೋಟದ ಒಳಗಿನಿಂದ ಹಠಾತ್ತನೆ ಕಾಡುಕೋಣ ದಾಳಿ ಮಾಡಿದೆ.

ದಾಳಿಯ ರಭಸಕ್ಕೆ ಆಟೋರಿಕ್ಷಾ ಮಗುಚಿಕೊಂಡಿದೆ. ಚಾಲಕನ ಕಾಲಿಗೆ ಹಾಗೂ ತುಟಿಗೆ ಗಾಯವಾಗಿದ್ದು, ಆಟೋ ಜಖಂಗೊAಡಿದೆ. ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ಇದೀಗ ಕಾಡುಕೋಣಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲದಂತಾಗಿದೆ. ಹಾಗೂ ಕಾಡುಕೋಣಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ದಾಂಧಲೆ ನಡೆಸುತ್ತಿವೆ. ಫಸಲಿರುವ ಕಾಫಿ ಗಿಡಗಳನ್ನು ಹಾನಿಗೊಳಿಸುತ್ತಿದ್ದು ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡುಕೋಣ ದಾಳಿ ನಡೆಸಿದ ಬಗ್ಗೆ ಅರಣ್ಯ ಇಲಾಖೆಗೆ ಚಾಲಕ ದೂರು ನೀಡಿದ್ದಾರೆ.