ಕಣಿವೆ, ಜ. ೨೧: ಹನ್ನೆರಡನೇ ಶತಮಾನದ ವಚನಕಾರರ ಸಾಮಾಜಿಕ ಆಂದೋಲನ ದಿಂದಾಗಿಯೇ ಸಮಾಜದಲ್ಲಿದ್ದ ತಾರತಮ್ಯ, ಜಾತಿ ಪದ್ಧತಿ, ಮೇಲು ಕೀಳು ಎಂಬ ಭಾವನೆಗಳು ದೂರವಾಗಿವೆ. ಹಾಗಾಗಿ ವಚನಕಾರರ ಚಳುವಳಿ ನಾಡಿಗೆ ನೀಡಿರುವ ಬಹುದೊಡ್ಡ ಬಳುವಳಿ ಎಂದು ಜಿಲ್ಲಾ ಕಸಾಪ ಕಾರ್ಯಕಾರಿ ಮಂಡಳಿ ನಿರ್ದೇಶಕರೂ ಆದ ಕನ್ನಡ ಉಪನ್ಯಾಸಕ ಮೆ.ನಾ. ವೆಂಕಟನಾಯಕ್ ಬಣ್ಣಿಸಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹನ್ನೆರಡನೇ ಶತಮಾನದ ವಚನಯೋಗಿ ಶ್ರೀ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶ್ರೀ ಸಿದ್ದರಾಮೇಶ್ವರರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದ ಅವರು, ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಮೊದಲಾದ ವಚನಕಾರರು ಹನ್ನೆರಡನೇ ಶತಮಾನವನ್ನು ಪಾವನಗೊಳಿಸಿದ ಶ್ರೇಷ್ಠ ಶರಣರು.
ಅಂದಿನ ಸಮಾಜದಲ್ಲಿ ಜನಸಾಮಾನ್ಯರನ್ನು ಮೂಢನಂಬಿಕೆಗಳ ಕಟ್ಟಳೆಗಳಲ್ಲಿ ಬಂಧಿಯಾಗಿಸಿ ಅವರ ಜೀವನವನ್ನು ನರಕವಾಗಿಸಿದಾಗ ಸಿದ್ದರಾಮೇಶ್ವರರಂತಹ ಶರಣರು ವಚನಕ್ರಾಂತಿಯನ್ನು ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ಹಸನು ಮಾಡುವ ಮೂಲಕ ಜಗಜ್ಯೋತಿಯಾದವರು ಎಂದು ಶರಣರ ಚಳುವಳಿಯನ್ನು ಸ್ಮರಿಸಿದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ ಹಾಗೂ ಚಿಂತಕ ಎಂ. ನಂಜುAಡಸ್ವಾಮಿ ಮಾತನಾಡಿ, ಕನ್ನಡ ನಾಡನ್ನು ಸಾಂಸ್ಕೃತಿಕವಾಗಿ ಶ್ರೀಮಂತವಾಗಿಸಿದ ವಚನ ಸಾಹಿತ್ಯ ವಿಶ್ವಕ್ಕೆ ಆದರ್ಶವಾಗಿದೆ.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನಗಳನ್ನು ಬಾಯಿಪಾಠ ಮಾಡುವ ಮೂಲಕ ವಚನಗಳ ಸಾರವರಿತು ಅದರಂತೆ ನಡೆದರೆ ಅವರ ಜೀವನವೇ ಪಾವನವಾಗುತ್ತದೆ ಎಂದರು. ಕುಶಾಲನಗರ ಉಪನೋಂದಣಾಧಿ ಕಾರಿ ಅನಿತಾ ಮೋಸಿಸ್ ಶ್ರೀ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಬಾಲ್ಯದ ದಿನಗಳಿಂದಲೇ ಶರಣರ ವಚನಗಳನ್ನು ಕಲಿಯುವ ಜೊತೆಗೆ ಉತ್ತಮವಾದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕರೆಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಹಾರನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎ.ಆರ್. ಮಹದೇವಪ್ಪ ವಿದ್ಯಾರ್ಥಿ ಜೀವನದ ಸಾರ್ಥಕತೆ ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಸಿದ್ದೇಗೌಡ, ಉಪನ್ಯಾಸಕ ಲೋಕೇಶ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಹೆಚ್.ಎಸ್. ಮಧು ಇದ್ದರು.