ಸೋಮವಾರಪೇಟೆ, ಜ. ೨೧: ಅರೆಭಾಷೆ ಗೌಡ ಸಮುದಾಯದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಸಮಾಜದ ಕಾರ್ಯಚಟುವಟಿಕೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಇಲ್ಲಿನ ಸಾಂದೀಪನಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅರೆಭಾಷೆ ಗೌಡ ಸಮುದಾಯದ ಸಂತೋಷ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅರೆಭಾಷೆ ಸಮುದಾಯದ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಸಮಾಜದ ಪುರಾತನ ಸಂಸ್ಕೃತಿ, ದೈವಿ ಆಚರಣೆ, ಅರೆಭಾಷೆ ಮಾತನಾಡುವುದರೊಂದಿಗೆ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರೆಭಾಷೆ ಸಮಾಜದ ಅಧ್ಯಕ್ಷ ದಂಡಿನ ಉತ್ತಯ್ಯ ವಹಿಸಿದ್ದರು. ವೇದಿಕೆಯಲ್ಲಿ ಸಾಂದೀಪನಿ ಶಾಲಾ ಮುಖ್ಯಸ್ಥ ಮೂಡಗದ್ದೆ ದಾಮೋದರ್, ಸಮಾಜದ ಉಪಾಧ್ಯಕ್ಷ ಮುಕ್ಕಾಟಿ ಚಂಗಪ್ಪ, ಕಾರ್ಯದರ್ಶಿ ನಂಗಾರು ವಸಂತ ಅವರುಗಳು ಉಪಸ್ಥಿತರಿದ್ದರು.
ಸಂತೋಷಕೂಟದ ಅಂಗವಾಗಿ ಸಮಾಜದ ಪುರುಷರು, ಮಹಿಳೆಯರು, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸೂದನ ಸೋಮಣ್ಣ, ಕುದುಕುಳಿ ಚಂದ್ರಕಲಾ, ನಂಗಾರು ಚಂದ್ರಕುಮಾರ್, ಕವಿತ, ನಂಗಾರು ಸುಮಿತ್ರಾ ಕಿರಣ್, ಕುಟ್ಟನ ಕಲ್ಪಶ್ರೀ ಅನಿಲ್, ನಂಗಾರು ಚಂದ್ರಕಲಾ ಅವರು ಕಾರ್ಯಕ್ರಮ ನಿರ್ವಹಿಸಿದರು.
ಸಮಾಜದ ಕುದುಕುಳಿ ಗಜೇಂದ್ರ, ಚಿಲ್ಲನ ನಂದ, ಕುದುಕುಳಿ ಭೋಜರಾಜ್, ಮೂಲೆಮಜಲು ಪೂರ್ಣಿಮಾ, ಸುಳ್ಳೆಕೋಡಿ ವಿನೋದ್, ಕುಟ್ಟನ ಅನಿಲ್, ನಂಗಾರು ಕಿರಣ್, ಕೆನೆರ ಜಗದೀಶ್, ಅಂಬ್ರಾಟಿ ಭಾಸ್ಕರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಮಂಥರ್ ಗೌಡ ಅವರನ್ನು ಸನ್ಮಾನಿಸಲಾಯಿತು.