ವೀರಾಜಪೇಟೆ. ಜ. ೨೧: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಹಿಂದೂ ಧರ್ಮದವರು, ಹಿಂದೂ ಸಂಘಟನೆಗಳು ನಗರ ಹಾಗೂ ದೇಗುಲಗಳನ್ನು ಕೇಸರಿ ತೋರಣಗಳಿಂದ ಸಿಂಗರಿಸಿವೆ. ಇದೀಗ ಪುರಸಭೆಯ ಮುಖ್ಯಧಿಕಾರಿಗಳು ಕೇಸರಿ ತೋರಣ ಮತ್ತು ಫ್ಲೆಕ್ಸ್ಗಳನ್ನು ತಾ. ೨೩ ರ ಸಂಜೆ ೫ ಗಂಟೆ ಒಳಗೆ ತೆರವುಗೊಳಿಸುವಂತೆ ಸಂಘಟನೆಗಳಿಗೆ ನೋಟೀಸ್ ಜಾರಿ ಮಾಡಿದ್ದು, ಇದರ ವಿರುದ್ಧ ತಾ. ೨೩ ರಂದು (ನಾಳೆ) ಪ್ರತಿಭಟನೆ ಮಾಡುವುದಾಗಿ ಹಿಂದೂ ಸಂಘಟನೆಗಳು ತಿಳಿಸಿವೆ.

ವೀರಾಜಪೇಟೆ ತಾಲೂಕು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ, ಭಾ.ಜ.ಪ ಹಾಗೂ ಹಿಂದೂ ಪರ ಸಂಘಟನೆಗಳಿAದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ತಾಲೂಕು ಅಧ್ಯಕ್ಷ ಬಿ.ಎಂ. ಕುಮಾರ್ ತಾ. ೨೨ ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮ ಮಂದಿರದ ಉದ್ಘಾಟನೆಯನ್ನು ಹಬ್ಬದಂತೆ ಆಚರಿಸಲು ಹಿಂದೂ ಧರ್ಮದವರು ಸಿದ್ಧತೆ ನಡೆಸಿದ್ದಾರೆ. ಇದೀಗ ತಾ. ೨೫ ರಂದು ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮದ ನೆಪವೊಡ್ಡಿ ಪುರಸಭೆಯ ಮುಖ್ಯ ಅಧಿಕಾರಿ ಕೇಸರಿ ತೋರಣಗಳನ್ನು ತೆರವು ಮಾಡುವಂತೆ ನೋಟಿಸು ಜಾರಿ ಮಾಡಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತಂದAತಾಗಿದೆ ಎಂದರು. ಕೇಸರಿ ಧ್ವಜ ಮತ್ತು ತೋರಣ ಅಳವಡಿಸಲು ತಾ. ೩೦ ರವರೆಗೆ ಅವಧಿ ನೀಡಲಾಗಿತ್ತು.

ಇದೀಗ ಏಕಾಏಕಿ ತೆರವು ಮಾಡುವಂತೆ ನೋಟೀಸ್ ನೀಡಲಾಗಿದ್ದು, ಇದರ ವಿರುದ್ಧ ತಾ. ೨೩ ರಂದು ಪುರಸಭೆ ಎದುರು ಪ್ರತಿಭಟನೆ ಮಾಡಲಾಗುವುದೆಂದರು. ಭಾ.ಜ.ಪ ನಗರ ಅಧ್ಯಕ್ಷರಾದ ಟಿ.ಪಿ.ಕೃಷ್ಣ ಮಾತನಾಡಿ ಸುಮಾರು ಐನೂರು ವರ್ಷಗಳ ಸತತ ಹೋರಾಟದ ಫಲವಾಗಿ ಭವ್ಯ ರಾಮಮಂದಿರ ಉದ್ಘಾಟನೆ ಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಗಮನದ ನೆಪವೊಡ್ಡಿ ಕೇಸರಿ ತೋರಣ ತೆರವು ಅದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ಭಜರಂಗದಳ ಜಿಲ್ಲಾ ಪ್ರಮುಖ್ ವಿವೇಕ್ ರೈ, ಭಜರಂಗದಳ ತಾಲೂಕು ಸಂಚಾಲಕ ಕುಶಾಲಪ್ಪ, ನಗರ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಭಾಸ್ಕರ್, ಸೋಮಣ್ಣ ಹಾಜರಿದ್ದರು.