ಗೋಣಿಕೊಪ್ಪಲು, ಜ. ೨೦: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾಜಪೇಟೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಶಾಸಕ ಎ.ಎಸ್. ಪೊನ್ನಣ್ಣ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ನಿರ್ಧಾರ ಕೈಗೊಂಡರು.

ಮುಖ್ಯಮAತ್ರಿಗಳ ಆಗಮನ ಹಿನ್ನೆಲೆಯಲ್ಲಿ ಹಲವು ಉಪ ಸಮಿತಿಯನ್ನು ರಚಿಸಲಾಯಿತು.

ನಗರದಲ್ಲಿ ಅಲಂಕಾರ ವ್ಯವಸ್ಥೆ, ಊಟೋಪಚಾರ, ಮುಖ್ಯಮಂತ್ರಿ ಗಳಿಗೆ ಪೂರ್ಣ ಕುಂಭ ಸ್ವಾಗತ, ಮೆರವಣಿಗೆಯಲ್ಲಿ ಚಂಡೆ ವಾದ್ಯ, ಕೊಡವ ಸಾಂಪ್ರದಾಯಿಕ ವಾಲಗ, ವೇದಿಕೆ ಸಿದ್ಧತೆ, ಪ್ರಮುಖ ರಸ್ತೆಯ ಡಾಂಬರೀಕರಣ ಸೇರಿದಂತೆ ಇನ್ನಿತರ ವಿಚಾರಗಳ ಸುದೀರ್ಘ ಚರ್ಚೆ ನಡೆಸಲಾಯಿತು.

ವೀರಾಜಪೇಟೆ ನಗರಕ್ಕೆ ಮೊದಲ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಇವರನ್ನು ಪಕ್ಷದ ವತಿಯಿಂದ ಚೌಕಿ ಸರ್ಕಲ್‌ನಲ್ಲಿ ಅದ್ದೂರಿ ಸ್ವಾಗತ ಕೋರುವ ಮೂಲಕ, ನೂರಾರು ಮಹಿಳೆಯರು ಪೂರ್ಣ ಕುಂಬ ಸ್ವಾಗತದೊಂದಿಗೆ ವೇದಿಕೆಗೆ ಕರೆತರಲು ನಿರ್ಧಾರ ಕೈಗೊಂಡರು.

ಸಭೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗುತ್ತದೆ.

ವಿವಿಧ ಉಪ ಸಮಿತಿಯಲ್ಲಿ ತಮ್ಮ, ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಬೇಕು, ವೇದಿಕೆಯ ಆವರಣದಲ್ಲಿ ಬೃಹತ್ ಪರದೆಯ ೫ ಎಲ್.ಇ.ಡಿ. ಅಳವಡಿಸಲಾಗುತ್ತದೆ. ಊಟದ ವ್ಯವಸ್ಥೆಗಾಗಿ ೫೦ ಕೌಂಟರ್ ತೆರೆಯಲಾಗುತ್ತದೆ ಎಂಬ ಮಾಹಿತಿ ಸಭೆಗೆ ತಿಳಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ, ಮುಖ್ಯಮಂತ್ರಿ ವೀಕ್ಷಣೆಗೆ ಜನರು ನಿರೀಕ್ಷೆಗೂ ಮೀರಿ ಆಗಮಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಗರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಾಗಿ ಇರುತ್ತದೆ. ಯಾವುದೇ ತೊಂದರೆ ಆಗದ ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡಲು ಮನವಿ ಮಾಡಿದರು.

ಸಭೆಯಲ್ಲಿ ವೀರಾಜಪೇಟೆ ಪುರಸಭಾ ಸದಸ್ಯರುಗಳಾದ ರಾಜೇಶ್ ಪದ್ಮನಾಭ, ಮೊಹಮ್ಮದ್ ರಫಿ, ಮತಿನ್ ಎಸ್.ಹೆಚ್, ಅಗಸ್ಟಿನ ಬೆನ್ನಿ, ಫಝೀಯ ತಬ್ಸಮ್ ಸೇರಿದಂತೆ ಪಕ್ಷದ ಪ್ರಮುಖರಾದ ನರೇಂದ್ರ ಕಾಮತ್, ಕೆ.ಎ. ಅಯೂಬ್, ಜಾನ್ಸನ್, ಹಮೀದ್, ದಿನೇಶ್, ಆತಿಫ್ ಮನ್ನ, ಜೋಕಿಮ್ ರೋಡ್ರಿಕ್ಸ್, ಮುತ್ತಿಬ್ ಹಾಗೂ ತಾಹಿರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.