ಸಿದ್ದಾಪುರ, ಜ. ೨೦: ಅಯೋಧ್ಯೆಯಲ್ಲಿ ತಾ. ೨೨ ರಂದು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಮಾಲ್ದಾರೆಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ತಾ. ೨೨ರಂದು ಬೆಳಗ್ಗೆ ದೇವಾಲಯದಲ್ಲಿ ಶ್ರೀರಾಮ ತಾರಕ ಹೋಮ ನಡೆಯಲಿದ್ದು, ನಂತರ ಮಧ್ಯಾಹ್ನ ಅಂದಾಜು ೨ ಸಾವಿರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮದ ಸಮಿತಿಯ ಸದಸ್ಯ ಶಿವಪ್ಪ ಮಾಲ್ದಾರೆಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ಅಂದಾಜು ೧೫೦೦ ರಿಂದ ೨೦೦೦ದಷ್ಟು ಮಂದಿ ತಾ.೨೨ ರಂದು ಭಾಗವಹಿಸಲಿದ್ದಾರೆ. ಈಗಾಗಲೇ ಶ್ರೀರಾಮನ ಬೃಹತ್ ಗಾತ್ರದ ಕಟೌಟ್ಗಳನ್ನು ಮಾಲ್ದಾರೆ ಸುತ್ತಮುತ್ತಲಿನಲ್ಲಿ ಅಳವಡಿಸಲಾಗಿದೆ ಎಂದರು. ಕಾರ್ಯಕ್ರಮವು ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯನವರ ನೇತೃತ್ವದಲ್ಲಿ ನಡೆಯಲಿದ್ದು, ಕಾರ್ಯಕ್ರಮ ಅಂಗವಾಗಿ ಹೋಮ ಮುಕ್ತಾಯದ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಸಾರ್ವಜನಿಕರಿಗೆ ವೀಕ್ಷಿಸಲು ದೊಡ್ಡ ಪರದೆಯನ್ನು ಅಳವಡಿಸಲಾಗುವುದು ಎಂದರು.