ಸೋಮವಾರಪೇಟೆ, ಜ. ೨೦: ಇಲ್ಲಿನ ಕಕ್ಕೆಹೊಳೆ ಜಂಕ್ಷನ್ನಲ್ಲಿರುವ ಅಶ್ವಾರೂಢ ಶ್ರೀ ಬಸವೇಶ್ವರ ಪ್ರತಿಮೆಗೆ ಹಾನಿಯಾಗದಂತೆ ಕ್ರಮವಹಿಸ ಬೇಕೆಂದು ಮಠಾಧೀಶರು ಹಾಗು ವೀರಶೈವ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.
ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗಾಗಿ ಮಣ್ಣು ತೆಗೆಯುತ್ತಿರುವುದರಿಂದ ಬಸವೇಶ್ವರ ಪ್ರತಿಮೆ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ವೀರಶೈವ ಸಮಾಜದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದರು.
ಸೇತುವೆ ನಿರ್ಮಾಣ ಕಾರ್ಯ ಸ್ವಾಗತಾರ್ಹ, ಅಭಿವೃದ್ಧಿಕಾರ್ಯಗಳಿಗೆ ನಮ್ಮ ಸಹಕಾರವಿದೆ ಆದರೆ ಬಸವೇಶ್ವರರ ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು.
ಈ ಸಂದರ್ಭ ಅಭಿಯಂತರ ಅರ್ಬಾಜ್ ಅಹಮ್ಮದ್ ಮಾತನಾಡಿ, ಹಲವು ದಿನಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪ್ರತಿಮೆಯ ಪಕ್ಕದಲ್ಲಿ ಜಾಗರೂ ಕತೆಯಿಂದ ಕೆಲಸ ಮಾಡುತ್ತಿದ್ದೇವೆ ಆದರೆ ಮಣ್ಣು ಕುಸಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆಗೆಯಬೇಕಾಗುತ್ತದೆ. ಕಾಮಗಾರಿ ಮುಗಿದ ನಂತರ ಮತ್ತೆ ಅಳವಡಿಸಲಾಗುವುದು ಎಂದರು.
ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಕಾರ್ಯ ನಿರ್ವಹಿಸುತ್ತೇವೆ. ಕಾಮಗಾರಿ ನಂತರ ದುರಸ್ತಿ ಕಾರ್ಯ ಮಾಡಿಕೊಡಲಾಗುತ್ತದೆ ಎಂದು ಗುತ್ತಿಗೆದಾರರಾದ ಆರ್.ಸಿ. ಗಣೇಶ್ ಹಾಗೂ ಚಂಗಪ್ಪ ತಿಳಿಸಿದರು.
ಈ ಸಂದರ್ಭ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ವೀರಶೈವ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಜಯಣ್ಣ, ಕಾರ್ಯದರ್ಶಿ ನಾಗರಾಜ್, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುಮಾ ಸುದೀಪ್ ಹಾಗು ವೀರಶೈವ ಸಮಾಜದ ಪ್ರಮುಖರು ಹಾಜರಿದ್ದರು.