ಕೂಡಿಗೆ, ಜ. ೨೦: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬ ಮಂದಿ ಫಲಾನುಭವಿಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಕುಶಾಲನಗರ ತಾಲೂಕು ದಂಡಾಧಿಕಾರಿರವರ ಕಚೇರಿಯಲ್ಲಿ ಹಕ್ಕುಪತ್ರ ವಿತರಿಸಿದರು.

೯೪ಸಿ ಮೂಲಕ ತಮ್ಮ ಆಸ್ತಿಯ ಹಕ್ಕು ಪತ್ರಕ್ಕಾಗಿ ಅರ್ಜಿ ಹಾಕಿದ್ದ ೧೫೦ ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸದÀ್ಯದಲ್ಲೇ ಹಕ್ಕು ಪತ್ರವನ್ನು ಮಂಜೂರು ಮಾಡುವ ಸಲುವಾಗಿ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿದರು.

ಇದೇ ಸಂಧರ್ಭ ಶಾಸಕರು ಕುಶಾಲನಗರ ತಾಲೂಕು ಕಚೇರಿಯಲ್ಲಿ ಸರ್ಕಾರದ ಆದೇಶದಂತೆ ಕಡತಗಳನ್ನು ನಿರ್ವಹಣೆ ಮಾಡಲು ಇ-ಆಫೀಸ್ ಅನ್ನು ಉದ್ಘಾಟನೆ ಮಾಡಿದರು. ನಂತರ ಕುಶಾಲನಗರ ತಾಲೂಕು ಕಚೇರಿಗೆ ರೆಕಾರ್ಡ್ ರೂಮ್ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭ ಕುಶಾಲನಗರ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯರು ಹಾಗೂ ಕುಡ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ನಟೇಶ್ ಗೌಡ, ಹಿರಿಯರಾದ ಗೋವಿಂದಪ್ಪ ಹಾಗೂ ಪ್ರಮುಖರಾದ ಕಿರಣ್ ಕುಮಾರ್, ಟಿ.ಪಿ. ಹಮೀದ್, ರಾಜೀವ್, ಶಿವಶಂಕರ್, ಶೇಖರ್ ಮತ್ತಿತರರು ಉಪಸ್ಥಿತರಿದ್ದರು.