ಮಡಿಕೇರಿ, ಜ. ೨೦: ದಕ್ಷಿಣ ಕೊಡಗಿನ ನಯನಮನೋಹರವಾದ ಜಲಪಾತ. ಇರ್ಪು ಜಲಪಾತ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಆದರೆ, ಪ್ರವಾಸಿಗರು ಹುಡುಕುವ-ಪ್ರಕೃತಿ ಸೌಂದರ್ಯದ ಹೊರತಾಗಿ, ಈ ಸ್ಥಳವು ಭಗವಾನ್ ರಾಮನ ‘ವನವಾಸ' ಕಾಲದ ಶ್ರೀಮಂತ ಪೌರಾಣಿಕ ಇತಿಹಾಸವನ್ನು ಹೊಂದಿದೆ.
ಇರ್ಪು ಜಲಪಾತದ ಸಮೀಪದಲ್ಲಿರುವ ಕುರ್ಚಿ ಗ್ರಾಮದಲ್ಲಿರುವ ರಾಮೇಶ್ವರ ದೇವಾಲಯವು ರಾಮ, ಸೀತೆ ಮತ್ತು ಲಕ್ಷö್ಮಣರ ಅರಣ್ಯ-ಜೀವನದ ಪೌರಾಣಿಕ ಕಥೆಯನ್ನು ವಿವರಿಸುತ್ತದೆ. ‘ವನವಾಸ’ದ ಕಾಲದಲ್ಲಿ ಭಗವಾನ್ ರಾಮ, ಸೀತಾದೇವಿ ಮತ್ತು ಲಕ್ಷö್ಮಣರು ಈಗ ಕುರ್ಚಿ ಗ್ರಾಮ ಎಂದು ಕರೆಯಲ್ಪಡುವ ಕಾಡಿನಲ್ಲಿ ತಂಗಿದ್ದರು. ಅವರ ವಾಸ್ತವ್ಯದ ಸಮಯದಲ್ಲಿ, ಸೀತಾದೇವಿಯು ಭಗವಾನ್ ಶಿವನನ್ನು ಪೂಜಿಸಲು ಬಯಸಿದಳು. ಶ್ರೀರಾಮನು ಕಾಶಿಯಿಂದ ‘ಶಿವಲಿಂಗ' ವನ್ನು ತರಲು ಶಿಷ್ಯ ಹನುಮಂತನನ್ನು ಕಳಿಸಿದನು ಎಂದು ರಾಮೇಶ್ವರ ದೇವಾಲಯದ ಮುಖ್ಯ ಅರ್ಚಕ ನಾರಾಯಣ ಸ್ವಾಮಿ ಮಾಹಿತಿಯಿತ್ತಿದ್ದಾರೆ.
ಹನುಮಂತನು ಶಿವನ ವಿಗ್ರಹವನ್ನು ತರಲು ಕಾಶಿಗೆ ಹೊರಟನು ಎಂದು ನಂಬಲಾಗಿದೆ. ಆದರೆ, ಕಾಶಿಗೆ ತೆರಳಿದಾಗ ಅಲ್ಲಿ ದೈವ ಕನ್ನಿಕೆಯರು ಗಂಗಾ ನದಿಯಲ್ಲಿ ಮೀಯುತ್ತಿದ್ದುದರಿಂದ ಅವರ ಸ್ನಾನಾನಂತರ ಹನುಮಂತ ಶಿವಲಿಂಗವನ್ನು ತರುವಾಗ ತಡವಾಯಿತು. ಈ ನಡುವೆ ಸಂಧ್ಯಾಕಾಲ ಮೀರಬಾರದೆಂದು ಪೂಜೆಯ ವಿಧಿವಿಧಾನವನ್ನು ತಡಮಾಡಲಾಗದ ಕಾರಣ, ಸೀತಾದೇವಿಯು ಮರಳಿನಿಂದ ಶಿವಲಿಂಗವನ್ನು ಮಾಡಿ ಅದನ್ನು ಈಗ ರಾಮೇಶ್ವರ ದೇವಾಲಯವೆನಿಸಿರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿದಳು ಎಂದು ಹೇಳಲಾಗುತ್ತದೆ. ಇದಲ್ಲದೆ, ಸೀತಾದೇವಿಗೆ ಪೂಜೆಯ ವಿಧಿವಿಧಾನಕ್ಕೆ ನೀರಿನ ಅಗತ್ಯವಿದ್ದುದರಿಂದ, ಲಕ್ಷö್ಮಣನು ಪರ್ವತದ ಮೇಲೆ ಬಾಣವನ್ನು ಬಿಟ್ಟನು. ಆಗ ಉದ್ಭವಿಸಿದ ನದಿಯನ್ನೇ ಲಕ್ಷö್ಮಣ ತೀರ್ಥ ಎಂದು ಕರೆಯಲಾಗುತ್ತದೆ, ಬ್ರಹ್ಮಗಿರಿ ವನ್ಯಧಾಮದಲ್ಲ್ಲಿ ಉದ್ಭವಿಸಿದ ಈ ಜಲಪಾತಕ್ಕೆ ಇರ್ಪು ಜಲಪಾತ ಎಂದು ಹೆಸರಿಸಲಾಗಿದೆ.
ಕಾಶಿಯಿಂದ ಬಂದ ರಾಮದೂತ ಹನುಮಂತನು ಕಾಶಿಯಿಂದ ಶಿವಲಿಂಗವನ್ನು ತಂದರೂ ಅದಾಗಲೇ ಶಿವಲಿಂಗದ ಸ್ಥಾಪನೆಯಾಗಿರುವುದನ್ನು ಗಮನಿಸಿ ತುಸು ನಿರಾಸೆಗೊಂಡನು. ಆಗ ಅಸಮಾಧಾನಗೊಂಡು ಸನಿಹದ ಪರ್ವತಕ್ಕೆ ಆತ ಜಿಗಿದಿದ್ದು ಈಗಲೂ ಅಲ್ಲಿ ಆಂಜನೇಯನ ಬಾಲದ ಗುರುತಿದೆ. ಅದನ್ನು ಹನುಮಂತ ಬೆಟ್ಟ ಎಂದು ಕರೆಯಲಾಗುತ್ತದೆ. ಆತನನ್ನು ಸಮಾಧಾನಗೊಳಿಸಿದ ಶ್ರೀರಾಮನು ಸೀತಾದೇವಿಯು ಶಿವಲಿಂಗವನ್ನು (ಮರಳಿನಿಂದ ಮಾಡ ಲ್ಪಟ್ಟಿದ್ದ) ಸ್ಥಾಪಿಸಿದ ಸ್ಥಳದಿಂದ ಪೂರ್ವಕ್ಕೆ ಮೂರು ಹೆಜ್ಜೆಯಿರಿಸು ವಂತೆ ಹನು ಮಂತನಿಗೆ ತಿಳಿಸಿದನು. ಆತ ಹೆÀಜ್ಜೆ ಯಿರಿಸಿದ ಸ್ಥಳಗಳಲ್ಲಿಯೂ ವಿಶೇಷ ದಿನಗಳಲ್ಲಿ ಪೂಜೆ ನಡೆಸಲಾಗುತ್ತಿದೆ. ಮೂರನೇ ಹೆಜ್ಜೆಯಿರಿಸಿದ ಸ್ಥಳವೇ ಹೇರ್ಮಾಡು ಎಂದು ಕರೆ ಸಿಕೊಂಡಿತು. ಆ ಸ್ಥಳದಲ್ಲಿ ಕಾಶಿಯಿಂದ ಆಂಜನೇಯ ತಂದ ಶಿವಲಿಂಗವನ್ನು ಶ್ರೀರಾಮನು ಸ್ಥಾಪಿಸಿದನು ಎಂದು ಹೇಳಲಾಗುತ್ತದೆ. ಇರ್ಪುವಿನ ರಾಮೇಶ್ವರ ದೇವಸ್ಥಾನದಲ್ಲಿ ಪೂಜಿಸಲ್ಪಡುವ ಶಿವಲಿಂಗವನ್ನು ಸೀತಾಮಾತೆ ಸ್ಥಾಪಿಸಿದರೆ ಹೇರ್ಮಾಡುವಿನಲ್ಲಿ (ಇರ್ಪುವಿನಿಂದ ಮೂರು ಮೈಲಿ ದೂರದಲ್ಲಿರುವ) ಹನುಮಂತನು ತಂದ ಶಿವಲಿಂಗವನ್ನು ಶ್ರೀರಾಮನು ಪ್ರತಿಷ್ಠಾಪಿಸಿದನೆಂದು ನಂಬಲಾಗಿದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಹೇಳಿದರು. ಇಂದಿಗೂ, ಶಿವರಾತ್ರಿಯ ಆಚರಣೆಗಳಲ್ಲಿ ಹೇರ್ಮಾಡುವಿನಲ್ಲ್ಲಿ ಶ್ರೀರಾಮನು ಸ್ಥಾಪಿಸಿದ ಶಿವಲಿಂಗಕ್ಕೆ ಮೊದಲು ಪೂಜೆಯನ್ನು ಸಲ್ಲಿಸಲಾಗುತ್ತದೆ ಮತ್ತು ನಂತರ ಸೀತಾದೇವಿ ಪ್ರತಿಷ್ಠಾಪಿಸಿದ ಶಿವಲಿಂಗಕ್ಕೆ ಇರ್ಪುವಿನ ರಾಮೇಶ್ವರ ದೇವಸ್ಥಾನದಲ್ಲಿ ಆಚರಣೆಗಳು ಮುಂದು ವರೆಯುತ್ತವೆ. ರಾಮೇಶ್ವರ ದೇವಾಲಯದಲ್ಲಿ ದೈನಂದಿನ ಪೂಜಾ ವಿಧಿ ವಿಧಾನಗ ಳನ್ನು ಮುಖ್ಯವಾಗಿ ಭಗವಾನ್ ಶಿವನಿಗೆ ಅರ್ಪಿಸಲಾಗುತ್ತದೆ. ಆದರೆ ಬಳಿಕ ಪ್ರತ್ಯೇಕ ವಾಗಿ ಶ್ರೀರಾಮನ ದೇಗುಲವನ್ನೂ ಸ್ಥಾಪಿಸಲಾಗಿದ್ದು, ಅಲ್ಲಿಯೂ ಪೂಜೆ ನಿರ್ವಹಿಸಲಾಗುತ್ತದೆ. ಇದೀಗ ದೇವಾಲಯವನ್ನು ಅಭಿವೃದ್ಧಿಪಡಿಸಲಾಗಿದೆ.
ಅಯೋಧ್ಯೆ ಪ್ರತಿಷ್ಠಾಪನೆ ಸಂದರ್ಭ ಪೂಜೆ
ಅಯೋಧ್ಯೆಯಲ್ಲಿ ಸೋಮವಾರ ನಡೆಯುವ ಶ್ರೀ ರಾಮ ಪ್ರತಿಷ್ಠಾಪನಾ ಸಂದರ್ಭ ಇರ್ಪು ಶ್ರೀ ರಾಮೇಶ್ವರ ಮತ್ತು ಹೇರ್ಮಾಡು ಈಶ್ವರ ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಇರ್ಪು ರಾಮೇಶ್ವರದಲ್ಲಿ ರುದ್ರಾಭಿಷೇಕ ಮತ್ತು ಪ್ರಸಾದ ವಿನಿಯೋಗವಿದೆ. ಹೇರ್ಮಾಡು ಈಶ್ವರ ದೇಗುಲದಲ್ಲಿ ಚಂಡಿಕಾಹೋಮ ಮತ್ತು ಪ್ರಸಾದ ವಿತರಣೆಯಿದೆ.