ಕುಶಾಲನಗರ, ಜ. ೧೯: ಕಲಾವಿದರಿಗೆ ಪ್ರೋತ್ಸಾಹ ಮತ್ತು ಕಲಾಭಿಮಾನಿಗಳಿಗೆ ಅನುಕೂಲ ಮಾಡುವ ಜೊತೆಗೆ ಕಲೆಗಳಿಗೆ ವೇದಿಕೆ ಸೃಷ್ಟಿಮಾಡುವ ಉದ್ದೇಶದೊಂದಿಗೆ ಕುಶಾಲನಗರದಲ್ಲಿ ನಿರ್ಮಾಣಗೊಂಡಿರುವ ಯೋಜನೆಯೊಂದು ಸುಮಾರು ೧೪ ವರ್ಷಗಳು ಕಳೆದರೂ ಇನ್ನೂ ಲೋಕಾರ್ಪಣೆಯಾಗಿಲ್ಲ.
ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯನ್ನು ಈ ಯೋಜನೆ ಪ್ರಶ್ನಿಸುವಂತಿದೆ.
ಕುಶಾಲನಗರದ ಹೃದಯ ಭಾಗದಲ್ಲಿ ಕಲಾ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ೨೦೦೯ ರಲ್ಲಿ ಚಾಲನೆಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾಭವನ ೨೦೨೪ ಬಂದರೂ ಇನ್ನೂ ಲೋಕಾರ್ಪಣೆಯಾಗದಿರುವುದಕ್ಕೆ ಹೊಣೆ ಯಾರು? ಎಂಬುದು ಕಲಾವಿದರು ಕಲಾರಸಿಕರ, ಸಾರ್ವಜನಿಕರ ಪ್ರಶ್ನೆಯಾಗಿದೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ೨೦೦೯ ರಲ್ಲಿ ಶಂಕುಸ್ಥಾಪನೆ ಸ್ಥಾಪನೆ ನೆರವೇರಿಸಿದ್ದು, ಆರಂಭಿಕವಾಗಿ ೩ ಕೋಟಿ ಅನುದಾನದಲ್ಲಿ ಕಾಮಗಾರಿ ಚಾಲನೆಗೊಂಡಿತು. ಬಳಿಕ ಹೆಚ್ಚುವರಿಯಾಗಿ ೯೦ ಲಕ್ಷದ ಪ್ರಸ್ತಾವನೆಯ ಅನುದಾನ ಕೂಡ ಬಿಡುಗಡೆಯಾಯಿತು. ಆದರೆ ಕುಂಟುತ್ತಾ ಸಾಗಿದ ಕಾಮಗಾರಿ ವೆಚ್ಚ ದುಪ್ಪಟ್ಟಾಯಿತು. ಒಳಾಂಗಣದ ಅಪೂರ್ಣ ಕಾಮಗಾರಿ, ಹೊರ ಆವರಣದಲ್ಲಿ ಕೆಲವೊಂದು ಕಾಮಗಾರಿಗೆ ಹೆಚ್ಚುವರಿ ೨ ಕೋಟಿಯ ಬೇಡಿಕೆ ಸರಕಾರದ ಮಟ್ಟದಲ್ಲಿ ಬೇಡಿಕೆಯಾಗಿಯೇ ಉಳಿಯಿತು. ಇದರಿಂದ ಕಟ್ಟಡ ಸಂಪೂರ್ಣ ಪೂರ್ಣಗೊಂಡಿದ್ದರೂ ಒಳಗೆ ಆಸನದ ವ್ಯವಸ್ಥೆ, ಧ್ವನಿ ಮತ್ತು ಬೆಳಕು, ಕಟ್ಟಡ ಸುತ್ತಲೂ ಇಂಟರ್‌ಲಾಕ್, ಜನರೇಟರ್, ನೀರಿನ ವ್ಯವಸ್ಥೆಗೆ ಕೊಳವೆಬಾವಿ, ಕ್ಯಾಂಟಿನ್ ಮತ್ತಿತರ ವ್ಯವಸ್ಥೆಗಳು ನಿರ್ಮಾಣಗೊಂಡಿಲ್ಲ.
ಇದಕ್ಕಾಗಿ ೨೦೧೫ ರಲ್ಲಿ ಹೆಚ್ಚುವರಿ ೨ ಕೋಟಿ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ ಆ ಮೊತ್ತ ಇದುವರೆಗೆ ಬಿಡುಗಡೆಗೊಂಡಿಲ್ಲ. ಇನ್ನು ಇದೇ ಪ್ರಸ್ತಾವನೆ ಈಗಿನ ಕಾಲಘಟ್ಟಕ್ಕೆ ಹೋಲಿಸಿದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡ ಸಂದರ್ಭ ಇದು ಒಂದು ರೀತಿಯ ಅಕ್ರಮ ಚಟುವಟಿಕೆಗಳ ಕೇಂದ್ರವಾಗಲು ಕೂಡ ಕಾರಣವಾಯಿತು.
ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾದ ಬೆನ್ನಲ್ಲೇ ಮುಖ್ಯ ಗೇಟುಗಳಿಗೆ ಬೀಗ ಜಡಿದ ಕಾರಣ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳುವಂತಾಯಿತು.
ಪಾಳು ಬಿದ್ದ ಬಂಗಲೆಯAತಿರುವ ಈ ಕಟ್ಟಡದ ಸುತ್ತ ಇದೀಗ ರಾತ್ರಿ ವೇಳೆ ಕುಡುಕರಿಗೆ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ.
ಅAದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರ ಅಧಿಕಾರದ ನಂತರ ರಾಜ್ಯದಲ್ಲಿ ಆರು ಮುಖ್ಯಮಂತ್ರಿಗಳು ಬದಲಾದರೂ ಕುಶಾಲನಗರದ ಕಲಾಭವನ ಮಾತ್ರ ಲೋಕಾರ್ಪಣೆಗೊಳ್ಳುವಲ್ಲಿ ವಿಫಲವಾಗಿದೆ.
ಯಾವುದೇ ಕಾರ್ಯಕ್ರಮ ಮಾಡಬೇಕಾದಲ್ಲಿ ಖಾಸಗಿ ಸಮುದಾಯ ಭವನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ವಿಶೇಷವೆAದರೆ ಕುಶಾಲನಗರದಲ್ಲಿ ಯಾವುದೇ ಯೋಜನೆ ಆಗಲಿ, ಬೇಗನೆ ಆರಂಭಗೊಳ್ಳುತ್ತದೆ. ಆದರೆ ಪೂರ್ಣಗೊಳ್ಳುವುದು ಅಪರೂಪ. ಒಂದು ಯೋಜನೆಗೆ ಮೂರು ಬಾರಿ ಭೂಮಿ ಪೂಜೆ ಶಂಕುಸ್ಥಾಪನೆ ನೆರವೇರುವುದು ಇಲ್ಲಿ ಸಾಮಾನ್ಯ. ರಾಜಕೀಯ ಮೇಲಾಟವೇ ಇಲ್ಲಿಯ ಅಭಿವೃದ್ಧಿಗೆ ಬಹುತೇಕ ಕಂಟಕ ಆಗಿದೆ ಎಂದರೆ ತಪ್ಪಲ್ಲ. ಸ್ಥಳೀಯ ಪ್ರಮುಖರ ಇಚ್ಛಾಶಕ್ತಿಯ ಕೊರತೆ ಕೂಡ ಈ ವೈಫಲ್ಯಕ್ಕೆ ಕೈಜೋಡಿಸಿದಂತೆ ಕಾಣುತ್ತಿದೆ ಎನ್ನುವುದು ಇಲ್ಲಿನ ಜನಸಾಮಾನ್ಯರ ಮಾತಾಗಿದೆ.
ಕಲಾಭವನ ಮಂಜೂರಾದ ಆರಂಭದಲ್ಲಿ ಬಯಲು ಸೀಮೆ ಸೇರಿದಂತೆ ಪಟ್ಟಣದ ಸುತ್ತಮುತ್ತ ವ್ಯಾಪ್ತಿಯ ಕಲಾವಿದರು ಕಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕಾತರರಾಗಿದ್ದರು.
ಜಿಲ್ಲಾಡಳಿತ ಹಾಗೂ ಸಂಬAಧಿಸಿದ ಇಲಾಖೆಗಳು ಈ ಒಂದು ಯೋಜನೆ ಇಲ್ಲಿ ಸ್ಥಾಪಿತವಾಗಿರುವುದನ್ನೇ ಮರೆತುಬಿಟ್ಟಿದ್ದಾರೆ. ಒಟ್ಟಾರೆ ಕೋಟ್ಯಾಂತರ ರೂ ವೆಚ್ಚದ ಯೋಜನೆಯೊಂದು ಕಾಡು ಪಾಲಾಗುತ್ತಿರುವುದು ಕಲಾಸಕ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕಾಗಿದೆ.
- ಎಂ.ಎನ್. ಚಂದ್ರಮೋಹನ್