(ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಜ. ೧೯: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು (೨೦೨೩ರಲ್ಲಿ) ವರ್ಷ ೧೨೭ ಬಾಲ ಗರ್ಭಿಣಿಯರು ಪತ್ತೆಯಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ೨೦೨೩ ರಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಇಲಾಖೆ (ಆರ್.ಸಿ.ಹೆಚ್) ಮಾಹಿತಿ ಪ್ರಕಾರ ರಾಜ್ಯದಲ್ಲಿ ೨೮,೬೫೭ ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆರ್.ಸಿ.ಹೆಚ್ ಮಾಹಿತಿ ಪ್ರಕಾರ ಕೊಡಗಿನಲ್ಲಿ ೧೪ ವರ್ಷದಿಂದ ೧೭ ವರ್ಷದ ವಯಸ್ಸಿನ ಅಪ್ರಾಪ್ತ ೨೭೦ ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗ ಕೊಡಗು, ಇವರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾಮದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅಂತಿಮವಾಗಿ ಜಿಲ್ಲೆಯಲ್ಲಿ ೧೨೭ ಬಾಲ ಗರ್ಭಿಣಿಯರು ಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ೪೯ ಸಾವಿರ ಬಾಲ ಗರ್ಭಿಣಿಯರಾಗಿದ್ದಾರೆ. ಕಳೆದೊಂದು ವರ್ಷ ಕೊಡಗಿನಲ್ಲಿ ೧೪ ವರ್ಷದಿಂದ ೧೭ ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಧರಿಸಿರುವುದು ನಿಜಕ್ಕೂ ಬೆಚ್ಚಿಬೀಳಿಸುವ ಸಂಗತಿಯಾಗಿದೆ.
ಪ್ರೇಮ ಪ್ರಕರಣಗಳೇ ಹೆಚ್ಚು!
ಕೊಡಗು ಜಿಲ್ಲೆಯಲ್ಲಿ ೨೦೨೩ ರಲ್ಲಿ ಪತ್ತೆಯಾಗಿರುವ ೧೨೭ ಬಾಲ ಗರ್ಭಿಣಿಯರಲ್ಲಿ ೪೦ ಪ್ರಕರಣಗಳು ಪ್ರೇಮ ಪ್ರಕರಣಗಳಾಗಿವೆ. ಇದರಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಮ ಪ್ರಕರಣಗಳಿಂದ ಹೆಣ್ಣು ಮಕ್ಕಳು ಗರ್ಭಿಣಿಗಳಾಗುತ್ತಿರುವ ಸುದ್ದಿಗಳು ನಾವು ದಿನನಿತ್ಯ ಪತ್ರಿಕಾ ಮಾಧ್ಯಮಗಳಲ್ಲಿ ಓದುತ್ತಿದ್ದೇವೆ. ಇದರಲ್ಲಿ ಬಹುತೇಕ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳೇ ಆಗಿದ್ದಾರೆ. ಅದರಲ್ಲಿ ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರದೆ ಕುಟುಂಬಗಳ ಮಧ್ಯೆ ಇತ್ಯರ್ಥಗೊಳಿಸುತ್ತಾರೆ. ಈ ರೀತಿಯ ಘಟನೆಗಳು ಕೊಡಗು ಜಿಲ್ಲೆಯಲ್ಲಿಯೂ ನಡೆದಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಪತ್ತೆಯಾಗಿರುವ ಪ್ರೇಮಪ್ರಕರಣಗಳಲ್ಲಿ ಗರ್ಭಿಣಿಗಳಾಗಿರುವ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ವಿರಳ. ಹೆಣ್ಣು ಹಾಗೂ ಗಂಡಿನ ಕುಟುಂಬಸ್ಥರು ಸಮಾಜಕ್ಕೆ ತಿಳಿಯದ ರೀತಿ ಇತ್ಯರ್ಥಗೊಳಿಸಿದ್ದಾರೆ. ಶಾಲಾ- ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ೧೪ ವರ್ಷದಿಂದ ೧೭ ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಪ್ರೇಮಕ್ಕೆ ಸಿಲುಕಿ ಇಂತಹ ಘಟನೆಗಳು ಸಂಭವಿಸುತ್ತಿವೆ.
೧೭ ವರ್ಷದ ವಯಸ್ಸಿನ ಹೆಣ್ಣು ಮಕ್ಕಳೇ ಹೆಚ್ಚು!
ಜಿಲ್ಲೆಯಲ್ಲಿ ೨೦೨೩ ರಲ್ಲಿ ಪತ್ತೆಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಧರಿಸುತ್ತಿರುವುದರಲ್ಲಿ ೧೭ ವರ್ಷದ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ೧೮ ವರ್ಷಕ್ಕೆ ಒಂದೆರಡು ತಿಂಗಳು ಬಾಕಿಯಿರುವ ಬಾಲಕಿಯರು ಗರ್ಭಿಣಿಯರಾಗಿರುವ ಅಂಶ ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ. ನಂತರ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ೧೮ ವರ್ಷ ತುಂಬಿದ ತಕ್ಷಣ ಮದುವೆ ಮಾಡಿಕೊಟ್ಟಿದ್ದಾರೆ.
೧೮ ವರ್ಷ ತುಂಬಿ ಮದುವೆಯಾಗಿ ಕೇವಲ ಒಂದೆರಡು ತಿಂಗಳಲ್ಲಿ ಗರ್ಭಿಣಿಗಳಾಗಿರುವ ೪೨ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ.
ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ವಿಚಾರಿಸುವಾಗ ೧೮ ವರ್ಷ ತುಂಬಿ ಕೇವಲ ಒಂದು ತಿಂಗಳಲ್ಲಿ ಗರ್ಭ ಧರಿಸಿರುವ ಮಾಹಿತಿ ಲಭ್ಯವಾಗಿದೆ. ಅದಲ್ಲದೆ ವಿವಾಹ ಮಾಡಿಕೊಂಡಿರುವ ಸರ್ಟಿಫಿಕೇಟ್ ಕೂಡ ತೋರಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ೦೬ ಫೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗಿ ೧೬ ಬಾಲಕಿಯರು ಊರು ಬಿಟ್ಟು ತೆರಳಿರುವ ಘಟನೆ ಕೂಡ ಜಿಲ್ಲೆಯಲ್ಲಿ ಪತ್ತೆಯಾಗಿದೆ. (ಮೊದಲ ಪುಟದಿಂದ) ಜಿಲ್ಲೆಯಲ್ಲಿ ಪತ್ತೆಯಾಗಿರುವ ಬಾಲ ಗರ್ಭಿಣಿಯರಲ್ಲಿ ಆದಿವಾಸಿ ಜನಾಂಗದ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಿಂದುಳಿದ ವರ್ಗಕ್ಕೆ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕೂಡ ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ.
ಅದಲ್ಲದೆ ಕೊಡಗು ಜಿಲ್ಲೆಯಲ್ಲಿ ಬಹುತೇಕ ಕಾಫಿ ತೋಟಗಳಲ್ಲಿ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದಾರೆ.
ಅಸ್ಸಾಮ್ ಮೂಲದ ಕಾರ್ಮಿಕರ, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭಿಣಿಯಾಗಿದ್ದಾರೆ. ಇವರಲ್ಲಿ ಬಹುತೇಕ ಊರು ಬಿಟ್ಟು ತೆರಳಿರುವುದರಿಂದ ಸ್ಪಷ್ಟ ಮಾಹಿತಿ ದೊರೆÀತಿಲ್ಲ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ೪೯,೦೦೦ ಅಪ್ರಾಪ್ತ ವಯಸ್ಕ ಗರ್ಭಪಾತಗಳು ನಡೆದಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಆಯೋಗವು ಪ್ರತಿ ಜಿಲ್ಲೆಗೆ ಸದಸ್ಯರನ್ನು ಸೇರಿಸಿ ಮರು ಸಮೀಕ್ಷೆ ನಡೆಸಲಿದೆ.
ಕಲ್ಯಾಣ ಕರ್ನಾಟಕ, ಮಂಡ್ಯ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಲಭ್ಯವಾಗಿದೆ. ಹದಿನೆಂಟು ತುಂಬುವ ಮೊದಲೇ ವಿವಾಹ, ಅತ್ಯಾಚಾರ, ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ಹೀಗೆ ಹಲವಾರು ರೀತಿಯಲ್ಲಿ ಅಪ್ರಾಪ್ತೆ ಯರು ಗರ್ಭಿಣಿಯ ರಾಗುತ್ತಿರುವ ಪ್ರಕರಣಗಳು ಬಯಲಾಗುತ್ತಿದೆ.
ಇದೇ ವೇಳೇ ಕೆಲವೊಂದು ಪ್ರಕರಣಗಳಲ್ಲಿ ಸಂತ್ರಸ್ತೆಯರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಹೇಳಿದ್ದಾರೆ.