ಮಡಿಕೇರಿ, ಜ. ೧೯: ವೀರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ "ಕೂಸಿನ ಮನೆಗೆ" ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಚಾಲನೆ ನೀಡಿದರು.
ನಂತರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆಯು ಸಹಕಾರಿಯಾಗಲಿದೆ. ಕೂಸಿನ ಮನೆಯಲ್ಲಿ ೬ ತಿಂಗಳಿAದ ೩ ವರ್ಷದೊಳಗಿನ ಮಕ್ಕಳನ್ನು ನುರಿತ ಆರೈಕೆದಾರರ ಮೂಲಕ ಪೋಷಿಸಲಾಗುತ್ತದೆ. ಇದರ ಸದುಪಯೋಗವನ್ನು ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಪಡೆದುಕೊಳ್ಳಲು ತಿಳಿಸಿದರು.
ಚಿಕ್ಕ ವಯಸ್ಸಿನ ಮಕ್ಕಳ ಮಾನಸಿಕ ಹಾಗೂ ಶಾರೀರಿಕ ಬೆಳೆವಣಿಗೆಯು ಪ್ರಮುಖ ಘಟ್ಟವಾಗಿದ್ದು, ಕೂಸಿನ ಮನೆಯಲ್ಲಿ ಈ ಎಲ್ಲಾ ರೀತಿಯ ಬೆಳವಣಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರೈಕೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ತಿತಿಮತಿ ಗ್ರಾ. ಪಂ. ಅಧ್ಯಕ್ಷ ಪೊನ್ನು, ಉಪಾಧ್ಯಕ್ಷೆ ಶ್ಯಾಮಲ, ತಾ.ಪಂ. ಇ.ಒ.ಕೆ.ಸಿ ಅಪ್ಪಣ್ಣ, ಮನರೇಗಾ ಸಹಾಯಕ ನಿರ್ದೇಶಕÀ ಎಂ.ಡಿ. ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಶ್ರೀ, ಗ್ರಾ.ಪಂ. ಸದಸ್ಯರು, ಗ್ರಾ.ಪಂ. ಸಿಬ್ಬಂದಿ ವರ್ಗದವರು, ಕೂಸಿನ ಮನೆಯ ಆರೈಕೆದಾರರು, ತಾಲೂಕು ಐ.ಇ.ಸಿ. ಸಂಯೋಜಕ ನರೇಂದ್ರ, ತಾಂತ್ರಿಕ ಸಹಾಯಕ ನಿರಂಜನ್ ಹಾಜರಿದ್ದರು.
ಕೂಸಿನ ಮನೆ : ರಾಜ್ಯಾದ್ಯಂತ ಮಹಾತ್ಮಗಾಂಧಿ ನರೇಗಾ ಯೋಜನೆಯ ಮಹಿಳಾ ಕೂಲಿಕಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲಾಗಿದೆ.
ಆರು ತಿಂಗಳಿನಿAದ ಮೂರು ವರ್ಷದೊಳಗಿನ ಮಕ್ಕಳನ್ನು ಈಗಾಗಲೇ ತರಬೇತಿ ಪಡೆದಿರುವ ‘ಕೇರ್ ಟೇಕರ್ಸ್’ಗಳು ನೋಡಿಕೊಳ್ಳಲಿದ್ದಾರೆ. ಮಕ್ಕಳಿಗಾಗಿ ಆಟಿಕೆಗಳು, ತೊಟ್ಟಿಲು, ಮಕ್ಕಳ ಸ್ನೇಹಿ ಶೌಚಾಲಯವನ್ನು ಸಹ ನಿರ್ಮಿಸಲಾಗಿದೆ. ಮಕ್ಕಳ ಆಕರ್ಷಣೆಗಾಗಿ ಕಾರ್ಟೂನ್ ಗೋಡೆ ಬರಹಗಳನ್ನೂ ಬರೆಸಲಾಗಿದೆ.
ಮಹಿಳಾ ಕೂಲಿಕಾರರು ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಪೋಷಣೆಗೆ ಅಗತ್ಯ ಚಟುವಟಿಕೆ ಮತ್ತು ಆಹಾರವನ್ನು ಉಚಿತವಾಗಿ ಸರ್ಕಾರದ ವತಿಯಿಂದ ನೀಡಲಾಗುತ್ತದೆ.
ರಾಜ್ಯಾದ್ಯಂತ ಈ ಕೂಸಿನ ಮನೆ ಕಾರ್ಯಾರಂಭಿಸಿದ್ದು, ಜಿಲ್ಲೆಯ ೧೨ ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಹಂತದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಅಧ್ಯಕ್ಷತೆಯ ಸಮಿತಿಯು ಕೂಸಿನ ಮನೆಯ ಮೇಲುಸ್ತುವಾರಿಯನ್ನು ವಹಿಸಲಿದೆ.