ಮಡಿಕೇರಿ, ಜ. ೧೯: ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಕಾರ್ಯಕರ್ತೆ ಯರಿಗೆ ಕನಿಷ್ಟ ವೇತನ, ನಿವೃತ್ತಿಯಾದವರಿಗೆ ಪಿಂಚಣಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ. ಬೇಡಿಕೆ ಈಡೇರದಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿAದು ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಪೊನ್ನಂಪೇಟೆ ತಾಲೂಕು ಸಂಘದ ಅಧ್ಯಕ್ಷೆ ವಿ.ಎಸ್. ಸುಮಿತ್ರ, ಕಳೆದ ೪೯ ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತರಿಗೆ ಕೇವಲ ೧೧,೫೦೦ ಹಾಗೂ ಸಹಾಯಕಿಯರಿಗೆ ೬,೫೦೦ ಮಾತ್ರ ವೇತನ ನೀಡಲಾಗುತ್ತಿದೆ. ಆದರೆ, ಇಲಾಖೆಯ ಕೆಲಸ ಕಾರ್ಯಗಳಲ್ಲದೆ, ಇತರ ಕೆಲಸಗಳಾದ ಬಿಎಲ್‌ಒ ಸರ್ವೆ, ಐಸಿಡಿಎಸ್ ಯೋಜನೇತರ ಕೆಲಸಗಳಾದ ಭಾಗ್ಯಲಕ್ಷಿö್ಮ, ಮಾತೃವಂದನಾ, ಗೃಹಲಕ್ಷಿö್ಮ ಮುಂತಾದ ಕೆಲಸಗಳಲ್ಲಿ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಶಾಲಾ ಪೂರ್ವ ಶಿಕ್ಷಣ ಕಲಿಕೆಗೆ ಅವಕಾಶ ನೀಡಬೇಕು. ಕಾರ್ಯಕರ್ತೆಯರಿಗೆ ಕನಿಷ್ಟ ೩೧ ಸಾವಿರ ವೇತನ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ, ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಬರುತ್ತಿಲ್ಲ, ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ. ಇದನ್ನು ಸರಿಪಡಿಸಬೇಕು. ೩ ರಿಂದ ೬ ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು, ಎನ್‌ಇಪಿ ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಕೇಂದ್ರ ಸರಕಾರ ಅಂಗನವಾಡಿಗಳಿಗೆ ನೀಡುವ ಅನುದಾನವನ್ನು ಕೂಡ ಸ್ಥಗಿತಗೊಳಿಸಿದೆ. ಕೇಂದ್ರದ ಈ ನೀತಿಯನ್ನು ಖಂಡಿಸಿ ತಾ.೨೩ ರಿಂದ ೨೫ ರವರೆಗೆ ರಾಜ್ಯವ್ಯಾಪಿ ಧರಣಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರ ಕಚೇರಿ ಮುಂದೆ ಧರಣಿ ನಡೆಯಲಿದೆ. ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಿದ್ದು, ತಾ. ೨೩ರಂದು ಅಂಗನವಾಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವದು ಎಲ್ಲ ೮೬೫ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿ ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸೋಮವಾರಪೇಟೆ ತಾಲೂಕು ಖಜಾಂಚಿ ಎಂ.ಬಿ. ಜಮುನ ಮಾತನಾಡಿ; ಕನಿಷ್ಟ ವೇತನ ನೀಡಲೇಬೇಕು. ಇದರೊಂದಿಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ ಕನಿಷ್ಟ ೧೦ ಸಾವಿರ ಪಿಂಚಣಿ ನೀಡಬೇಕು. ಚುನಾವಣೆ ಇತರ ಸಂದರ್ಭಗಳಲ್ಲಿ ಬಿಎಲ್‌ಒಗಳಾಗಿ ಕೆಲಸ ಮಾಡುವವರಿಗೆ ವರ್ಷಕ್ಕೆ ಕೇವಲ ೭ ಸಾವಿರ ನೀಡಲಾಗುತ್ತಿದೆ. ಅವರುಗಳಿಗೆ ೨೫ ಸಾವಿರ ನೀಡಿದರೂ ಸಾಕಾಗುವದಿಲ್ಲ. ಈ ಎಲ್ಲ ಬೇಡಿಕೆಗಳನ್ನು ಸರಕಾರ ಈಡೇರಿಸದಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಡಿಕೇರಿ ತಾಲೂಕು ಅಧ್ಯಕ್ಷೆ ಡಿ.ಎಸ್. ಸರೋಜ ಮಾತನಾಡಿ; ಕಳೆದ ಎಂಟು ವರ್ಷಗಳಿಂದ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿಲ್ಲ, ಇದುವರೆಗೆ ಮಕ್ಕಳ ಪೌಷ್ಟಿಕ ಆಹಾರ ಸರಿಯಾದ ರೀತಿಯಲ್ಲಿ ಬರುತ್ತಿತ್ತು, ಇದೀಗ ಕಳಪೆಯಾಗಿದೆ. ಮಕ್ಕಳಿಗೆ ನೀಡಲು ಕಷ್ಟವಾಗುತ್ತಿದೆ, ಹಾಗಾಗಿ ಜಿಲ್ಲೆಯ ಐದು ತಾಲೂಕಿನ ಕಾರ್ಯ ಕರ್ತೆಯರು, ಸಹಾಯಕಿಯರು ಒಟ್ಟು ಸೇರಿ ಧರಣಿ ನಡೆಸುವದಾಗಿ ಹೇಳಿದರು.

ಗೋಷ್ಠಿಯಲ್ಲಿ ವೀರಾಜಪೇಟೆ ತಾಲೂಕು ಅಧ್ಯಕ್ಷೆ ಎ.ವಿ. ಶೀಲ, ಕಾರ್ಯದರ್ಶಿ ಎಂ.ಬಿ. ಲೀಲಾವತಿ, ಪೊನ್ನಂಪೇಟೆ ಕಾರ್ಯದರ್ಶಿ ಬಿ.ಸಿ. ನಳಿನಾಕ್ಷಿ ಇದ್ದರು.