ಮಡಿಕೇರಿ, ಜ. ೧೮: ಸದಾ ವಿವಾದಕ್ಕೆ ಕಾರಣವಾಗುತ್ತಿರುವ ರಾಜಾಸೀಟ್ ಆವರಣದಲ್ಲಿರುವ ಬೀದಿಬದಿ ಅಂಗಡಿಗಳ ತೆರವು ವಿಚಾರ ಇದೀಗ ಮತ್ತೆ ಸದ್ದು ಮಾಡಿದೆ. ಇಂದು ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಈ ಮಧ್ಯೆ ಸದಸ್ಯರ ನಡುವೆಯೇ ಪರ-ವಿರೋಧ ವ್ಯಕ್ತವಾಗಿ ವಾಗ್ವಾದ ಸೃಷ್ಟಿಯಾಯಿತು.
ಕೆಲವು ತಿಂಗಳುಗಳ ಹಿಂದೆ ವರ್ತಕ ಹಾಗೂ ರಾಜಾಸೀಟ್ ಕಾವಲುಗಾರನ ನಡುವೆ ನಡೆದ ಗಲಾಟೆ ವಿಚಾರದ ನಂತರ ವ್ಯಾಪಾರಿಗಳನ್ನು ರಾಜಾಸೀಟ್ ಮುಂಭಾಗದಿAದ ತೆರವುಗೊಳಿಸಲಾಗಿತ್ತು. ಕೂರ್ಗ್ವಿಲೇಜ್ ಸಮೀಪ ಅಂಗಡಿ ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದ ವರ್ತಕರು ದಸರಾ ಸಮಯದಲ್ಲಿ ಶಾಸಕರು ಭರವಸೆ ನೀಡಿದ ಹಿನ್ನೆಲೆ ಮತ್ತೆ ರಾಜಾಸೀಟ್ ಬಳಿಯೇ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಗರಸಭೆ ಕೆಲ ದಿನಗಳ ಹಿಂದೆ ತೆರವಿಗೆ ಮುಂದಾಗಿತ್ತು. ಈ ಸಂದರ್ಭವೂ ವಾಗ್ವಾದ ಉಂಟಾಗಿ ತೆರವಿಗೆ ೨೪ ಗಂಟೆಯ ಕಾಲಾವಕಾಶವನ್ನು ಪೌರಾಯುಕ್ತ ವಿಜಯ ಅವರು ನೀಡಿದ್ದರು. ಆದರೂ, ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.
ಇಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಸದಸ್ಯ ಅರುಣ್ ಶೆಟ್ಟಿ, ಮಹೇಶ್ ಜೈನಿ ಸೇರಿದಂತೆ ನಗರಸಭಾ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಂಗಡಿಗಳನ್ನು ತೆರವುಗೊಳಿಸುವಂತೆ ವರ್ತಕರಿಗೆ ಸೂಚಿಸಿದರು. ಈ ಸಂದರ್ಭ ತೆರವಿಗೆ ಒಪ್ಪದ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಲವಂತವಾಗಿ ಅಂಗಡಿಗಳನ್ನು ತೆರವಿಗೆ ಮುಂದಾಗಲಾಯಿತು.
ಈ ವೇಳೆ ಎಸ್.ಡಿ.ಪಿ.ಐ. ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಸ್ಥಳಕ್ಕಾಗಮಿಸಿ ದಿಢೀರ್ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಇದರಿಂದ ಆಡಳಿತರೂಢ ಬಿಜೆಪಿ ಸದಸ್ಯರು ಹಾಗೂ ಅಮೀನ್ ನಡುವೆ ವಾಗ್ವಾದ ಉಂಟಾಯಿತು. ಸಭೆಯಲ್ಲಿ ನಿರ್ಣಯ ಕೈಗೊಳ್ಳದೆ ಈ ರೀತಿ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಅಲ್ಲದೇ ವ್ಯಾಪಾರಿಗಳಿಗೆ ಗುರುತಿಸಿದ ಜಾಗದಲ್ಲಿ ಮೂಲಭೂತ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದರು.
ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಪಾದಚಾರಿಗಳ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೊಡಕು ಆಗುತ್ತಿರುವ ಕುರಿತು ವ್ಯಾಪಕ ದೂರುಗಳು ಕೇಳಿಬಂದಿವೆ. ವ್ಯಾಪಾರಿಗಳಿಗೆ ಪರ್ಯಾಯ ಜಾಗ ಗುರುತಿಸಿ ನೀಡಿದ್ದೇವೆ. ಹೋಗಲು ನಿರಾಕರಿಸುತ್ತಿರುವುದು ಸರಿಯಲ್ಲ. ಹಂತಹAತವಾಗಿ ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ನಗರ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.