ಚೆಟ್ಟಳ್ಳಿ, ಜ. ೧೮: ಕೃಷಿಕರು ಬೆಳೆದ ಪ್ಯಾಷನ್ ಫ್ರೂಟ್, ಪಪ್ಪಾಯ ಹಣ್ಣುಗಳ ಪ್ರದರ್ಶನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಗಮನ ಸೆಳೆಯಿತು. ಪ್ಯಾಷನ್ ಫ್ರೂಟ್ ಹಾಗೂ ಪಪ್ಪಾಯ ಹಣ್ಣಿನ ವೈವಿಧ್ಯತೆಯನ್ನು ದಾಖಲು ಪಡಿಸಿ ತಳಿಗಳ ಸಂರಕ್ಷಣೆ, ತಳಿಗಳ ಅಭಿವೃದ್ಧಿ ಪಡಿಸಲು ತಳಿಗಳ ಮೌಲ್ಯವರ್ಧನೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಗತಿಪರ ಬೆಳೆಗಾರರು ಹಾಗೂ ಕಾಫಿ ಮಂಡಳಿಯ ಮಾಜಿ ಅಧ್ಯಕ್ಷÀ ಬೋಸ್ ಮಂದಣ್ಣ ಅವರು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೇಂದ್ರದ ಮೇಲ್ವಿಚಾರಕ ಡಾ. ರಾಜೇಂದಿರನ್ ಎಸ್. ಕಾರ್ಯಕ್ರಮದ ಕುರಿತಾಗಿ ಮಾತನಾಡಿ, ಪ್ಯಾಷನ್ ಫ್ರೂಟ್ ಹಾಗೂ ಪಪ್ಪಾಯ ಹಣ್ಣಿನ ವೈವಿಧ್ಯತಾ ಪ್ರದರ್ಶನ ಹಾಗೂ ತಜ್ಞರೊಂದಿಗಿನ ಚರ್ಚಾ ಕಾರ್ಯಕ್ರಮದಿಂದ ಬೆಳೆಗಾರರಿಗೆ ಪ್ರಯೋಜನವಾಗಲಿದೆ ಎಂದರು.
ಕೇಂದ್ರದ ಮಾಜಿ ಮೇಲ್ವಿಚಾರಕ ಡಾ. ಸಲ್ಲದ್ಮಟ್ಟ್ ಮಾತನಾಡಿ, ವಿದೇಶದಲ್ಲಿ ಪ್ಯಾಷನ್ ಫ್ರೂಟ್ ಹಾಗೂ ಪಪ್ಪಾಯ ಹಣ್ಣಿಗೆ ಭಾರೀ ಬೇಡಿಕೆ ಇದೆ. ೧೯೫೮ರಲ್ಲಿ ಪಿ.ಪಿ.ನಂಜಪ್ಪ ಅವರು ಕೇಂದ್ರದ ಮೇಲ್ವಿಚಾರಕರಾಗಿದ್ದ ಸಂದರ್ಭ ಕೊಡಗಿನ ಕಿತ್ತಳೆಯ ಜೊತೆ ‘ಕೂರ್ಗ್ ಹನಿ ಡ್ಯೂ’ ಎಂಬ ಪಪ್ಪಾಯ ಹಾಗೂ ಕಾವೇರಿ ಪ್ಯಾಷನ್ ಫ್ರೂಟ್ ತಳಿಯನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಟ್ಟಾಗ ದೇಶ ವಿದೇಶದಲ್ಲೂ ಹೆಸರು ಗಳಿಸಿತ್ತು. ಮುಂದಿನ ದಿನಗಳಲ್ಲೂ ಈ ತಳಿಗಳ ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕೆಂದರು.
ನಿವೃತ್ತ ಹಿರಿಯ ವಿಜ್ಞಾನಿ ಡಾ.ವೈ.ಟಿ.ಎನ್. ರೆಡ್ಡಿ ಮಾತನಾಡಿ, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಪ್ಯಾಷನ್ ಫ್ರೂಟ್ ಹಾಗೂ ಪಪ್ಪಾಯ ಹಣ್ಣಿನ ಬೆಳೆಯನ್ನು ಅಭಿವೃದ್ಧಿ ಪಡಿಸಿ ವಾಣಿಜ್ಯ ಬೆಳೆಯ ಜೊತೆಗೆ ಮಿಶ್ರಬೆಳೆಯಾಗಿ ಬೆಳೆಯುವ ಮೂಲಕ ಆದಾಯವನ್ನು ಪಡೆಯುವಂತಾಗಬೇಕೆAದರು.
ಪೊನ್ನಂಪೇಟೆಯ ಕೃಷಿ ಸಾಧಕ ಹಾಗೂ ಪ್ರಗತಿಪರ ಕೃಷಿಕ ರವಿಶಂಕರ್ ಬಿ.ಪಿ. ಮಾತನಾಡಿ, ಕೃಷಿಕ ಎನಿಸಿಕೊಳ್ಳಲು ನನಗೆ ಹೆಮ್ಮೆ ಎನಿಸಿದೆ. ಕೊಡಗಿನ ವಾತಾವರಣ ವಿವಿಧ ಹಣ್ಣುಗಳನ್ನು ಬೆಳೆಯಲು ಉತ್ತಮವಾಗಿದ್ದು, ತನ್ನ ತೋಟದಲ್ಲಿ ದೇಶೀಯ ಹಣ್ಣಿನಿಂದ ಹಿಡಿದು ಹಲವು ಬಗೆಯ ವಿದೇಶಿ ಹಣ್ಣುಗಳನ್ನು ಬೆಳೆಯುತ್ತಿರುವುದಾಗಿ ತಿಳಿಸಿದರು. ಭಾರತೀಯ ತೋಟಗಾರಿಕಾ ಕೇಂದ್ರದ ಹಣ್ಣಿನ ವಿಜ್ಞಾನಿ ಹಾಗೂ ಕಾರ್ಯಕ್ರಮದ ಮೇಲ್ವಿಚಾರಕ ಡಾ.ಶಂಕರನ್ ಎಂ. ಮಾತನಾಡಿ, ಕಾರ್ಮಿಕರು ಹಾಗೂ ಸಿಬ್ಬಂದಿ ಕೊರತೆಯಿಂದÀ ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತಿದ್ದು ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಸರಕಾರವನ್ನು ಕೋರಲಾಗಿದೆ ಎಂದರು. ಕೇಂದ್ರದ ವಿಜ್ಞಾನಿಗಳಾದ ಡಾ.ಎ.ಪಿ. ರಾಣಿ ಸ್ವಾಗತಿಸಿ, ಡಾ. ಮುರುಳಿದರ್ ಬಿ.ಎಂ. ನಿರೂಪಿಸಿ, ಡಾ. ನಯನ್ದೀಪಕ್ ವಂದಿಸಿದರು.
ಸನ್ಮಾನ : ವಿ.ವಿ. ಸಲ್ಲದ್ಮಟ್, ವೈ.ಕೆ.ಎನ್ ರೆಡ್ಡಿ, ರವಿಶಂಕರ್.ಬಿ.ಪಿ ಅವರಿಗೆ ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರದಲ್ಲಿ ನುರಿತ ತಜ್ಞರಿಂದ ಪ್ಯಾಷನ್ ಫ್ರೂಟ್ ಹಾಗೂ ಪಪ್ಪಾಯ ಹಣ್ಣಿನ ಬೇಸಾಯ, ತಳಿಗಳ ಅಭಿವೃದ್ಧಿ, ಮಾರುಕಟ್ಟೆ, ಕೀಟಬಾಧೆಯ ಬಗ್ಗೆ ಮಾಹಿತಿ ನೀಡಿದರು.
ವಿವಿಧೆಡೆಯಿಂದ ಆಗಮಿಸಿದ್ದ ೪೦ ಕೃಷಿಕರು ಪ್ಯಾಷನ್ ಫ್ರೂಟ್ ಹಣ್ಣಿನ ಪ್ರದರ್ಶನ ಮಾಡಿದರೆ, ೭೦ ಕೃಷಿಕರು ಪಪ್ಪಾಯ ಹಣ್ಣನ್ನು ಪ್ರದರ್ಶಿಸಿದರು. ಪಪ್ಪಾಯ ಹಣ್ಣು ಪ್ರದರ್ಶನದಲ್ಲಿ ಚೆಟ್ಟಳ್ಳಿಯ ಮುಳ್ಳಂಡ ವಿವೇಕ್ ಉತ್ತಯ್ಯ ಪ್ರಥಮ ಸ್ಥಾನ ಪಡೆದು ರೂ.೧೦ ಸಾವಿರ ನಗದು ತಮ್ಮದಾಗಿಸಿಕೊಂಡರು. ಕಂಬಿಬಾಣೆಯ ರಂಶೀದ್ ದ್ವಿತೀಯ ಸ್ಥಾನ ಗಳಿಸಿ ರೂ.೭ ಸಾವಿರ ನಗದು ಪಡೆದುಕೊಂಡರು. ನಾಪೋಕ್ಲುವಿನ ಎಂ.ಪಿ. ತಿಮ್ಮಯ್ಯ ತೃತೀಯ ಸ್ಥಾನಗಳಿಸಿ ರೂ. ೩ ಸಾವಿರ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು. ಪ್ಯಾಷನ್ ಫ್ರೂಟ್ನ ಪ್ರದರ್ಶನದಲ್ಲಿ ಬೈಲುಕೊಪ್ಪದ ರಾಜೇಶ್ ಪ್ರಥಮ ಸ್ಥಾನ ಗಳಿಸಿ ರೂ.೧೦ ಸಾವಿರ ನಗದು, ಪೊನ್ನಂಪೇಟೇಯ ರವಿಶಂಕರ್.ಬಿ.ಪಿ. ದ್ವಿತೀಯ ಗಳಿಸಿ ರೂ.೭ ಸಾವಿರ ನಗದು ಹಾಗೂ ನಂಜರಾಯಪಟ್ಟಣದ ಗೋಪಾಲನ್ ತೃತೀಯ ಗಳಿಸಿ ರೂ.೩ ಸಾವಿರ ನಗದು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು. - ಪುತ್ತರಿರ ಕರುಣ್ಕಾಳಯ್ಯ