ಸಿದ್ದಾಪುರ, ಜ. ೧೬: ಹಾಡಹಗಲೇ ಕಾಡಾನೆ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಪಳ್ಳಕೆರೆ ಕಾಫಿ ತೋಟದಲ್ಲಿ ನಡೆದಿದೆ.
ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಅಮಿರ (೩೫) ಎಂಬಾಕೆ ಇತರ ಕಾರ್ಮಿಕರೊಂದಿಗೆ ಪಳ್ಳಕೆ ರೆಯ ಎ.ಸಿ. ಸುಬ್ಬಯ್ಯ ಎಂಬವರ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಕಾಫಿ ತೋಟದಿಂದ ಬಂದ ಕಾಡಾನೆ ದಾಳಿ ನಡೆಸಿದೆ. ಕಾಡಾನೆ ಕಂಡ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು. ಈ ಸಂದರ್ಭ ಎಡವಿ ಬಿದ್ದ ಅಮಿರಾಳನ್ನು ಕಾಡಾನೆಯು ಸೊಂಡಿಲಿನಿAದ ಎತ್ತಿ ಬಿಸಾಕಿದ್ದು ಮತ್ತೊಮ್ಮೆ ದಾಳಿಗೆ ಮುಂದಾದ ಸಂದರ್ಭ ಸ್ಥಳೀಯ ತೋಟ ಕಾರ್ಮಿಕರ ಕೂಗಾಟದಿಂದ ಕಾಡಾನೆಯು ತೋಟದೊಳಗೆ ಓಡಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕಾಡಾನೆ ದಾಳಿಗೆ ತುತ್ತಾದ ಮಹಿಳೆಯು ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಜಿಲ್ಲಾಸ್ಪತ್ರೆಗೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಸೂಚನೆ ಮೇರೆಗೆ ಭೇಟಿ ನೀಡಿದ್ದ ಕೆ.ಪಿ.ಸಿ.ಸಿ. ವಕ್ತಾರ ಸಂಕೇತ್ ಪೂವಯ್ಯ ಗಾಯಾಳು ಮಹಿಳೆ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಅಲ್ಲದೆ ಶಾಸಕರು ವೈದ್ಯರೊಂದಿಗೆ ಚರ್ಚಿಸಿ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದ್ದಾರೆ ಎಂದು ಮಾಧ್ಯಮ ದವರಿಗೆ ಮಾಹಿತಿ ನೀಡಿದರು. ಗಾಯಾಳು ಮಹಿಳೆಯನ್ನು ಜಿಲ್ಲಾಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತು.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿದರು. ಇತ್ತೀಚೆಗೆ ಕರಡಿಗೋಡು ವ್ಯಾಪ್ತಿಯಲ್ಲಿ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆಯು ದಾಳಿ ನಡೆಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಕಾರ್ಮಿಕರನ್ನು ಭಯಭೀತರನ್ನಾ ಗಿಸಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.