ಮಡಿಕೇರಿ, ಜ. ೧೬: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಳೆದ ಐವತ್ತು ವರ್ಷಗಳಿಂದ ಇದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಸ್ಥಳದಲ್ಲಿ ಇಲ್ಲದೆ ಇದೀಗ ಬಹುತೇಕ ಐದು ತಿಂಗಳು ಪೂರ್ಣ ಗೊಳ್ಳುತ್ತಿದೆ. ಆದರೆ ಇನ್ನೂ ಈ ಪ್ರತಿಮೆ ಮರು ಅಳವಡಿಕೆಯಾಗದಿ ರುವುದು ವಿಪರ್ಯಾಸವೇ ಸರಿ.
ಆಗಸ್ಟ್ ೨೧ ರಂದು ಬೆಳ್ಳಂಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ. ಬಸ್ವೊಂದು ಈ ಪ್ರತಿಮೆಗೆ ಡಿಕ್ಕಿಯಾಗಿ ಪ್ರತಿಮೆ ಧರೆಗುರುಳಿತ್ತು. ಇದು ಆಕಸ್ಮಿಕವಾಗಿ ನಡೆದು ಹೋದ ಅವಘಡವಾದರೂ ಸೇನೆ-ಸೇನಾಧಿಕಾರಿಗಳ ವಿಚಾರದಲ್ಲಿ ಭಾವನಾತ್ಮಕ ಸಂಬAಧ ಹೊಂದಿರುವ ಕೊಡಗಿನ ಜನತೆಗೆ ಇದು ಆಘಾತಕಾರಿಯಾದ ಸುದ್ದಿಯಾಗಿತ್ತು. ಸ್ಥಳಕ್ಕೆ ಬಹುತೇಕ ಪ್ರಮುಖರು ಜನಪ್ರತಿನಿಧಿಗಳ ದಂಡೇ ಆಗಮಿಸಿತ್ತು. ನಗರಸಭಾ ಆಡಳಿತ ತಕ್ಷಣದಲ್ಲೇ ಒಂದಷ್ಟು ಹಾನಿಗೀಡಾಗಿದ್ದ ತಿಮ್ಮಯ್ಯ ಅವರ ಕಂಚಿನ ಮೂರ್ತಿಯನ್ನು ತಿಮ್ಮಯ್ಯ ಸ್ಮಾರಕ ಭವನಕ್ಕೆ ಸಾಗಿಸಿದರು. ಜಿಲ್ಲಾಡಳಿತದ ಪ್ರಮುಖರು ಉಸ್ತುವಾರಿ ಸಚಿವರು, ಸಂಸದರು, ಶಾಸಕರುಗಳು ಈ ರೀತಿಯಾಗಿ ಎಲ್ಲರೂ ಈ ಬಗ್ಗೆ ಜನರ ನಾಡಿಮಿಡಿತಕ್ಕೆ ಸ್ಪಂದಿಸಿ ಒಂದರ ಮೇಲೊಂದು ಸಭೆಯೂ ನಡೆಯಿತು. ದಸರಾ ಉತ್ಸವಕ್ಕೆ ಮುಂಚಿತವಾಗಿ ಇದೇ ಸ್ಥಳದಲ್ಲಿ ಪ್ರತಿಮೆಯನ್ನು ಒಂದಷ್ಟು ವ್ಯವಸ್ಥಿತ ರೀತಿಯಲ್ಲಿ ಮರು ಅಳವಡಿಸಲು ನಿರ್ಧಾರ ಕೈಗೊಂಡು ಇದನ್ನು ಸಾರ್ವಜನಿಕವಾಗಿ ಪ್ರಕಟಿಸ ಲಾಯಿತು. ವಿಶೇಷ ಸಭೆಯೂ ನಡೆದು ಇನ್ನೇನು ಅತ್ಯಂತ ತ್ವರಿತವಾಗಿ ಪ್ರತಿಮೆ ಮತ್ತೆ ಇದ್ದ ಸ್ಥಳದಲ್ಲೇ ಅಳವಡಿಸಲ್ಪಡುವುದು ಖಚಿತ ಎಂಬ ಭಾವನೆ ಆ ಸಂದರ್ಭದಲ್ಲಿ ಎಲ್ಲರಲ್ಲೂ ಮೂಡಿತ್ತು. ಆದರೆ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಈ ಪ್ರಕರಣ ಮತ್ತೆ ಕೈಗನ್ನಡಿ ಹಿಡಿದಿದೆ.
ಪ್ರತಿಮೆಗೆ ಆದ ಹಾನಿಯನ್ನು ಸರಿಪಡಿಸಲು ಮೈಸೂರಿನ ಶಿಲ್ಪಕಲಾ ಅಕಾಡೆಮಿಗೆ ಸಾಗಿಸಲಾಗಿದ್ದು, ಅಲ್ಲಿನ ಶಿಲ್ಪಿಗಳು ಇದಕ್ಕೆ ಮತ್ತೆ ಕಾಯಕಲ್ಪ ನೀಡಿದ್ದಾರೆ. ಪ್ರತಿಮೆ ಸಿದ್ಧವಾಗಿ ಹಲವಷ್ಟು ಸಮಯ ಕಳೆದಿದೆ. ಆದರೆ ಘಟನೆ ಸಂಭವಿಸಿ ಐದು ತಿಂಗಳು ಪೂರ್ಣಗೊಳ್ಳುತ್ತಾ ಬರುತ್ತಿದ್ದರೂ ಈ ಕೆಲಸ ಮಾತ್ರ ಇನ್ನೂ ಪರಿಪೂರ್ಣಗೊಂಡಿಲ್ಲ. ಬದಲಿಗೆ ತಿಮ್ಮಯ್ಯ ಪ್ರತಿಮೆ ಇದ್ದ ಸ್ಥಳದಲ್ಲಿನ ಕಾಮಗಾರಿ ಆಮೆ ನಡಿಗೆಗಿಂತಲೂ ಕಡಿಮೆ ವೇಗದಲ್ಲಿ ಕಂಡು ಬರುತ್ತಿದೆ. ಸುತ್ತಲೂ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು ಸಂಚಾರ ವ್ಯವಸ್ಥೆಗೂ ಇದು ತೊಡಕಾಗಿದೆ. ಟ್ರಾಫಿಕ್ ಕಿರಿಕಿರಿ, ದಿನನಿತ್ಯ ಸಾಮಾನ್ಯ ಎಂಬAತಾಗಿದೆ. ಜನರ-ವಿದ್ಯಾರ್ಥಿಗಳ ಓಡಾಟವೂ ಇಲ್ಲಿ ಹೆಚ್ಚಿರುತ್ತದೆ. ಈ ಬಗ್ಗೆಯೂ ಸಂಬAಧಿಸಿದವರ ಚಿತ್ತ ಹರಿಯುತ್ತಿಲ್ಲ. ಇದಕ್ಕೂ ಮಿಗಿಲಾಗಿ ದೇಶ ಮಾತ್ರವಲ್ಲ ವಿಶ್ವವೇ ಗೌರವಿಸುವ ಮಹಾನ್ ಸೇನಾನಿಯೊಬ್ಬರ ಬಗೆಗಿನ ಈ ತಾತ್ಸಾರ ಮನೋಭಾವನೆಯನ್ನು ಜನರು ಪ್ರಶ್ನಿಸುವಂತಾಗಿದೆ.
ಮಾರ್ಚ್ ೩೧ಕ್ಕೆ ತಿಮ್ಮಯ್ಯ ಅವರ ಜನ್ಮದಿನಾಚರಣೆ ಬರಲಿದ್ದು, ಈ ವೇಳೆಗಾದರೂ ಪ್ರತಿಮೆಯನ್ನು ಮರುಸ್ಥಾಪಿಸಿ ಅವರಿಗೆ ಗೌರವ ನೀಡಲಾಗುವುದೋ ಕಾದು ನೋಡಬೇಕಿದೆ.
ಈ ಕುರಿತಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಶೇಷ ಗಮನ ಹರಿಸಿ ಶೀಘ್ರ ಪ್ರತಿಮೆ ಮರು ಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
- ಕಾಯಪಂಡ ಶಶಿ ಸೋಮಯ್ಯ