ಸೋಮವಾರಪೇಟೆ, ಜ. ೧೬: ಪುಷ್ಪಗಿರಿ ಬೆಟ್ಟ ತಪ್ಪಲಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ ೬೫ನೇ ವರ್ಷದ ವಾರ್ಷಿಕ ಮಹಾರಥೋತ್ಸವ ಸಹಸ್ರಾರು ಮಂದಿ ಭಕ್ತಗಣದ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಇಂದು ವೈಭವಯುತವಾಗಿ ನೆರವೇರಿತು.

ಸೋಮವಾರಪೇಟೆ, ಜ. ೧೬: ಪುಷ್ಪಗಿರಿ ಬೆಟ್ಟ ತಪ್ಪಲಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ ೬೫ನೇ ವರ್ಷದ ವಾರ್ಷಿಕ ಮಹಾರಥೋತ್ಸವ ಸಹಸ್ರಾರು ಮಂದಿ ಭಕ್ತಗಣದ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಇಂದು ವೈಭವಯುತವಾಗಿ ನೆರವೇರಿತು.

ಮೂರ್ತಿಯನ್ನು ಹೊತ್ತಿದ್ದ ರಥವನ್ನು ಭಕ್ತಿಪೂರ್ವಕವಾಗಿ ಎಳೆದು ಶಾಂತಳ್ಳಿ ಗ್ರಾಮದ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಆಕರ್ಷಕ ಗೊಂಬೆ ಕುಣಿತ, ನಾದಸ್ವರದೊಂದಿಗೆ ಗ್ರಾಮದ ರಥಬೀದಿಯಲ್ಲಿ ಅಲಂಕೃತ ರಥದಲ್ಲಿ ಶ್ರೀ ಕುಮಾರಲಿಂಗೇಶ್ವರ ದೇವರ ಮೆರವಣಿಗೆ ನಡೆಸಿದ ಸಂದರ್ಭ ರಸ್ತೆಯನ್ನು ಶುಚಿಗೊಳಿಸಿ ಈಡುಗಾಯಿ ಒಡೆದು ಭಕ್ತಿಪೂರ್ವಕವಾಗಿ ದೇವರಿಗೆ ನಮಿಸಲಾಯಿತು.

ಸಂಸದ ಪ್ರತಾಪ್ ಸಿಂಹ, ಶಾಸಕ ಡಾ. ಮಂಥರ್‌ಗೌಡ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್, ಮೈಸೂರು ಗೋಪಾಲಗೌಡ ಆಸ್ಪತ್ರೆಯ ಮಾಲೀಕ ಶುಶ್ರೂತ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷೆ ಸವಿತ ವಿಜಯ, ಬೆಟ್ಟದಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಜಿ. ತಮ್ಮಯ್ಯ, ಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಸಜನ್ ಮಂದಣ್ಣ, ಆರ್‌ಎಂಸಿ ಮಾಜೀ ಅಧ್ಯಕ್ಷ ಬಿ.ಬಿ. ಸತೀಶ್ ಸೇರಿದಂತೆ ಇತರರು ರಥೋತ್ಸವಕ್ಕೆ ಚಾಲನೆ ನೀಡಿದರು.

೬೫ನೇ ರಥೋತ್ಸವ ಹಾಗೂ ವಾರ್ಷಿಕ ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಕರುವಿನ ಹಬ್ಬ, ಗರುಡಗಂಬದಲ್ಲಿ ತುಪ್ಪದ ನಂದಾದೀಪ ಬೆಳಗುವದು, ಪುಷ್ಪಗಿರಿ ಬೆಟ್ಟದಲ್ಲಿರುವ ಪುರಾತನ ದೇವಾಲಯದಲ್ಲಿ ದೀಪೋತ್ಸವ, ಅರಸುಬಲ ಸೇವೆ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದ್ದು, ಇಂದು ಮಹಾರಥೋತ್ಸವ ವಿಜೃಂಭಣೆ ಯೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.

ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ದೇವಾಲಯದ ಪ್ರಧಾನ ಅರ್ಚಕ ಲಕ್ಷಿö್ಮÃನಾರಾಯಣ ಭಟ್, ಗಣೇಶ್ ಭಟ್, ಸರ್ವೇಶ್ ಭಟ್, ರಾಧಾಕೃಷ್ಣ ಭಟ್, ಪ್ರಸಾದ್ ಭಟ್, ಅನಂತ ಭಟ್, ಮನು ಭಟ್, ಶಶಾಂಕ್ ಭಟ್ ನೇತೃತ್ವದ ತಂಡದವರಿAದ ಬೆಳಗ್ಗಿನಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು.

ನಿರಂತರವಾಗಿ ಅನಾದಿಕಾಲ ದಿಂದಲೂ ನಡೆದುಕೊಂಡು ಬಂದ ಪದ್ಧತಿಯ ಮೇರೆ ಕೂತಿ ನಾಡು, ತೋಳುನಾಡು, ಗಡಿನಾಡು ವ್ಯಾಪ್ತಿಗೆ ಒಳಪಡುವ ಕೊತ್ತನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಯಡೂರು, ತಲ್ತರೆಶೆಟ್ಟಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ವಿಶೇಷ ಪರಿಶುದ್ಧತೆಯೊಂದಿಗೆ ವಾದ್ಯಗೋಷ್ಠಿಯ

(ಮೊದಲ ಪುಟದಿಂದ) ಮೂಲಕ ದೇವಾಲಯಕ್ಕೆ ಆಗಮಿಸಿ ಅರಸುಬಲ ಸೇವೆ ಸಲ್ಲಿಸಿದರು.

ಇದರೊಂದಿಗೆ ಪುಷ್ಪಗಿರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಬೃಹತ್ ದೀಪ ಹೊತ್ತಿಸಿ ನಂತರ ವಿಶೇಷ ಶ್ರದ್ಧೆಯೊಂದಿಗೆ ದೇವರನ್ನು ಶಾಂತಳ್ಳಿಗೆ ಕರೆತಂದು ಪೂಜೆ ನೆರವೇರಿಸ ಲಾಯಿತು. ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಯ ಸಾವಿರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮೂರು ದಿನಗಳ ಕಾಲ ಮಧ್ಯಾಹ್ನ ಸಾವಿರಾರು ಮಂದಿ ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನೆರವೇರಿತು. ರಥೋತ್ಸವದ ನಂತರ ಸಂಜೆ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ತಾ.೧೭ರಂದು (ಇಂದು) ಮಹಾ ಸಂಪ್ರೋಕ್ಷಣೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ನಡೆಯುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ತೆರೆಬೀಳಲಿದೆ ಎಂದು ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದರು.

ಜಾತ್ರೋತ್ಸವದ ಅಂಗವಾಗಿ ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕೆ, ಸಂಬಾರ ಮಂಡಳಿ ಸೇರಿದಂತೆ ಇತರ ಇಲಾಖೆಗಳ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಥಳೀಯ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾ ಮಟ್ಟದ ಪುರುಷರ ಮುಕ್ತ ಕಬಡ್ಡಿ, ವಾಲಿಬಾಲ್ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದವು.

ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಪ್ರಧಾನ ಕಾರ್ಯದರ್ಶಿ ಕೆ.ಕೆ. ಮುತ್ತಣ್ಣ, ಉಪಾಧ್ಯಕ್ಷ ಬಸವರಾಜು, ಖಜಾಂಚಿ ಎಸ್.ಆರ್. ಉತ್ತಯ್ಯ, ಸಹ ಕಾರ್ಯದರ್ಶಿ ಎಸ್.ಹೆಚ್. ಗಿರೀಶ್, ಮಾಜೀ ಅಧ್ಯಕ್ಷ ಲಿಂಗರಾಜು, ಕೆ.ಟಿ. ಮಧುಕುಮಾರ್, ದೇವಾಲಯ ಕಾರ್ಯದರ್ಶಿ ಕೆ.ಪಿ. ಚಂಗಪ್ಪ ಸೇರಿದಂತೆ ಸಮಿತಿ ಪದಾಧಿಕಾರಿಗಳು ಜಾತ್ರೋತ್ಸವದ ಉಸ್ತುವಾರಿ ವಹಿಸಿದ್ದರು.

ಪ್ರಕೃತಿಯ ಸೌಂದರ್ಯ ನೆಲೆಯಾಗಿರುವ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯನ್ನು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಆಚರಿಸಿಕೊಂಡು ಬರುತ್ತಿರುವದು ವಿಶೇಷ. ಜಾತ್ರೆಯನ್ನು ಈ ವ್ಯಾಪ್ತಿಯ ಜನತೆ ಹಬ್ಬದ ರೀತಿಯಲ್ಲಿ ಸಂಭ್ರಮಿಸುವುದು ವಾಡಿಕೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯ ನಿಮಿತ್ತ ಹೊರಭಾಗದಲ್ಲಿ ನೆಲೆಸಿರುವ ಮಂದಿಯೂ ಸಹ ಈ ಜಾತ್ರೆಯಲ್ಲಿ ಒಟ್ಟಾಗುವದರಿಂದ ಇಡೀ ಗ್ರಾಮವೇ ಸಂಭ್ರಮದಲ್ಲಿರುತ್ತದೆ. ಇದರೊಂದಿಗೆ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದಿAದ ಪ್ರತಿವರ್ಷ ನಡೆಯುತ್ತಿದೆ.

ಚೋಳರ ಕಾಲದ ದೇವಾಲಯ: ಕುಮಾರಲಿಂಗೇಶ್ವರ ದೇವಾಲಯವು ಚೋಳ ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು ಸಂಪೂರ್ಣವಾಗಿ ಬೃಹತ್ ಕಲ್ಲುಗಳ ಜೋಡಣೆಯಿದೆ. ಶ್ರೀ ಕ್ಷೇತ್ರವು ಸೋಮವಾರಪೇಟೆ ನಗರದಿಂದ ೧೦ ಕಿ.ಮಿ. ದೂರದಲ್ಲಿದ್ದು, ಪ್ರಕೃತಿ ಸೌಂದರ್ಯದ ನಡುವೆ ನೆಲೆ ನಿಂತಿರುವ ಪುಷ್ಪಗಿರಿ ಸಮೀಪದ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಮಾರ್ಗಮಧ್ಯೆ ಶ್ರೀಕುಮಾರಲಿಂಗೇಶ್ವರ ದೇವಾಲಯ ನೆಲೆಯಾಗಿದೆ.

ಕಳೆದ ೬ ದಶಕಗಳಿಂದ ಪ್ರತಿ ವರ್ಷ ಮಕರ ಸಂಕ್ರಾAತಿ ಸಂದರ್ಭ ದೇವಾಲಯದಲ್ಲಿ ರಥೋತ್ಸವ ಹಾಗೂ ೧ ವಾರಗಳ ತನಕ ಧಾರ್ಮಿಕ ವಿಧಿ ವಿಧಾನಗಳಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತವೆ. ಸಾವಿರಾರು ಮಂದಿ ಭಕ್ತಾದಿಗಳು ಶ್ರೀ ಕುಮಾರಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿ ಫಲ ತಾಂಬೂಲ, ದವಸ ಧಾನ್ಯ, ಕಾಣಿಕೆ, ಹರಕೆಗಳನ್ನು ಸಲ್ಲಿಸುತ್ತಾರೆ. ತಾ. ೧೭ರಂದು (ಇಂದು) ಅಪರಾಹ್ನ ೩ ಗಂಟೆಗೆ ಜಾತ್ರೋತ್ಸವ ಮುಕ್ತಾಯ ಸಮಾರಂಭ ನಡೆಯಲಿದೆ.

-ವಿಜಯ್ ಹಾನಗಲ್