ಚೆಟ್ಟಳ್ಳಿ, ಜ. ೧೭: ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯ ವಿಸ್ತರಣಾ ವಿಭಾಗ ಹಾಗೂ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ಸಹಯೋಗದಲ್ಲಿ ಕಾಫಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ.
ಕಾಫಿ ಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತಾಲೂಕುವಾರು ಸಮೀಕ್ಷಾ ಕಾರ್ಯಕ್ಕೆ ನೇಮಿಸ ಲಾಗಿದ್ದು, ಕಳೆದ ಗುರುವಾರದಿಂದ ಕೊಡಗಿನಾದ್ಯಂತ ಸಮೀಕ್ಷೆ ನಡೆಯುತ್ತಿದೆ. ಅಕಾಲಿಕ ಮಳೆಯಿಂದಾಗಿ ಉತ್ತರ ಕೊಡಗಿನಲ್ಲಿ ಅರೆಬಿಕಾ ಫಸಲಿನ ಮೇಲೆ ತೀವ್ರ ಪರಿಣಾಮ ಬೀರಿದ್ದು, ಹಣ್ಣಿನ ಕುಯ್ಲಿನ ಕಾರ್ಯ ತಡವಾದ್ದರಿಂದ ಗಿಡದಲ್ಲಿ ಹಣ್ಣುಗಳು ಒಡೆದು ಉದುರಿವೆೆ. ಹೆಚ್ಚಿನ ಮಳೆಯಾದ ಕಡೆ ರೋಬಸ್ಟಾ ಗಿಡಗಳಲ್ಲಿ ಹೂವಾದ ಪರಿಣಾಮ ಬೆಳೆಗಾರರು ಹಣ್ಣಿನ ಕುಯ್ಲು ಕಾರ್ಯವನ್ನು ನಿಲ್ಲಿಸಿದ್ದಾರೆ.
ಈ ಎಲ್ಲಾ ಕಾರಣದಿಂದ ಕಾಫಿಮಂಡಳಿ ಸಮೀಕ್ಷಾ ಕಾರ್ಯವನ್ನು ಅತೀ ಶೀಘ್ರದಲ್ಲಿ ನಡೆಸಿ ತಾ. ೩೦ರೊಳಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕಾಫಿ ಮಂಡಳಿಯ ಉಪನಿರ್ದೇಶಕ ಡಾ.ವಿ. ಚಂದ್ರಶೇಖರ್ ತಿಳಿಸಿದ್ದಾರೆ.