ಶ್ರೀಮಂಗಲ, ಜ. ೧೭: ಜನವರಿ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗೆ ಉಂಟಾಗಿರುವ ನಷ್ಟ ಪರಿಹಾರಕ್ಕೆ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ಒದಗಿಸಿ ಕೊಡುವುದಾಗಿ ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಭರವಸೆ ನೀಡಿದ್ದಾರೆ. ಮೈಸೂರಿನ ಜಲದರ್ಶಿನಿ ಸಂಸದರ ಕಚೇರಿಯಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗ ನೀಡಿದ ಮನವಿ ಆಲಿಸಿ ಈ ಭರವಸೆ ಅವರು ನೀಡಿದರು.

ಈ ಸಂದರ್ಭ ಬೆಳೆಗಾರರ ಒಕ್ಕೂಟದ ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಸದಸ್ಯ ಅಜ್ಜಿಕುಟ್ಟಿರ ಬೋಪಣ್ಣ ಹಾಜರಿದ್ದರು.