ಮಡಿಕೇರಿ, ಜ. ೧೭: ಅಕಾಲಿಕ ಮಳೆ, ಕಾಡು ಪ್ರಾಣಿಗಳ ಕಾಟದಿಂದಾಗಿ ಈಗಾಗಲೇ ಕಂಗೆಟ್ಟಿರುವ ಜಿಲ್ಲೆಯ ಹಲವು ಬೆಳೆಗಾರರಿಗೆ ಇದೀಗ ಮತ್ತೊಂದು ಸಮಸ್ಯೆ ತಲೆದೋರಿದೆ. ಇದೀಗ ಕಾಫಿ ಕುಯ್ಲಿನ ಸಮಯವಾಗಿದ್ದು, ಕಾರ್ಮಿಕರ ಕೊರತೆಯು ಬೆಳೆಗಾರರನ್ನು ಕಾಡುತ್ತಿದೆ. ಈ ಸಮಸ್ಯೆಯನ್ನೇ ಬಂಡವಾಳವಾಗಿ ಬಳಸುತ್ತಿರುವ ಹಲವು ಖದೀಮರು ಹೊಸದೊಂದು ದಂಧೆಗೆ ಮುಂದಾಗಿದ್ದಾರೆ.

ಈ ಹಿಂದೆ ಕೊಡಗು ಜಿಲ್ಲೆಯ ತೋಟಗಳಲ್ಲಿ ಕಾಫಿ ಕುಯ್ಲು ಮಾಡಿದ್ದ ತಮಿಳುನಾಡು ಹಾಗೂ ಅಸ್ಸಾಂ ಮೂಲದ ಕೆಲ ಕಾರ್ಮಿಕರು, ತೋಟದ ಮಾಲೀಕರಿಗೆ ಕರೆ ಮಾಡಿ, ‘ನಾವು ಚಿಕ್ಕಮಗಳೂರಿನಲ್ಲಿ ಕಾಫಿ ಕುಯ್ಲು ಮುಗಿಸಿದ್ದೇವೆ. ಸುಮಾರು ೧೦೦ ರಿಂದ ೨೦೦ ಮಂದಿ ಇದ್ದೇವೆ. ನಿಮ್ಮ ತೋಟದಲ್ಲಿಯೂ ಕುಯ್ಲು ಮಾಡುವದಕ್ಕೆ ಬರುತ್ತೇವೆ. ಪ್ರಯಾಣಕ್ಕೆ ಹಣ ನೀಡಿ’ ಎಂದು ಹಲವು ತೋಟದ ಮಾಲೀಕರಿಗೆ ಕರೆ ಮಾಡಿ ಗೂಗಲ್ ಪೇ ಮೂಲಕ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ನಂತರ ತೋಟದ ಮಾಲೀಕರ ನಂಬರ್‌ಅನ್ನು ಬ್ಲಾಕ್ ಮಾಡುತ್ತಿರುವ ಹಲವಾರು ಪ್ರಸಂಗಗಳು ವರದಿಯಾಗಿವೆ. ಕಾರ್ಮಿಕರ ತೀವ್ರ ಕೊರತೆ ಅನುಭವಿಸುತ್ತಿರುವ ಬೆಳೆಗಾರರು ವಿಧಿ ಇಲ್ಲದೆ ಹಣವನ್ನು ಜಮಾ ಮಾಡುತ್ತಿದ್ದಾರೆ. ಸುಮಾರು ರೂ.೧೦,೦೦೦ ಮುಂಗಡವಾಗಿ ಬೇಡಿಕೆ ಇಡುತ್ತಿರುವ ಖದೀಮರ ಮಾತನ್ನು ನಂಬುತ್ತಿರುವ ಬೆಳೆಗಾರರು ಕನಿಷ್ಟ ೧ ರಿಂದ ೨ ಬಾರಿ ಗೂಗಲ್-ಪೇ ಮೂಲಕ ಜಮಾ ಮಾಡುತ್ತಿದ್ದಾರೆ. ಇದಾದ ಬಳಿಕ ತೋಟದ ಮಾಲೀಕರ ಫೋನ್ ಸಂಖ್ಯೆಯನ್ನು ಖದೀಮರು ಬ್ಲಾಕ್ ಮಾಡುತ್ತಿದ್ದಾರೆ.

ಜಿಲ್ಲೆಯ ಕಾಫಿ, ಕರಿಮೆಣಸು ವ್ಯಾಪಾರಸ್ಥರು, ಬೆಳೆ ಮಾರಾಟ ಮಾಡುವವರ ಸಂಪೂರ್ಣ ವಿವರವನ್ನು ಸಂಗ್ರಹಿಸುವುದು ಕಡ್ಡಾಯ ಎಂದು ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಪ್ರಕಟಣೆ ಹೊರಡಿಸಿದ್ದರು. ಬೆಳೆಗಾರರ, ಮಾರಾಟಗಾರರ ಹಾಗೂ ಬೆಳೆಗಳ ಭದ್ರತಾ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಆಗಿದೆ. ಆದರಿದೀಗ ಕಾರ್ಮಿಕರ ಕೊರತೆಯಲ್ಲಿ ಬಳಲುತ್ತಿರುವ ಬೆಳೆಗಾರರು ಅಪರಿಚಿತರ ಮಾತಿಗೆ ಬಯಲಾಗಿ ಹಣವನ್ನು ಗೂಗಲ್-ಪೇ ಮೂಲಕ ಜಮಾ ಮಾಡುತ್ತಿರುವುದು ಹೊಸ ಬೆಳವಣಿಗೆ ಆಗಿದ್ದು, ಈ ರೀತಿ ಆಗದಂತೆ ಬೆಳೆಗಾರರು ಎಚ್ಚರ ವಹಿಸಬೇಕೆಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮನವಿ ಮಾಡಿದ್ದಾರೆ.