ಮಡಿಕೇರಿ, ಜ. ೧೬: ಎಲ್ಲರನ್ನೂ ಜೊತೆ ಸೇರಿಸಿಕೊಂಡು ಹೋಗುತ್ತಾರೆ ಎಂಬ ನಿರೀಕ್ಷೆ ಮೇರೆ ತನಗೆ ರಾಜ್ಯ ವರಿಷ್ಠರು ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂಬ ಭಾವನೆ ನನ್ನದು, ಅದರಂತೆ ಎಲ್ಲ ಹಿರಿಯ, ಕಿರಿಯ ಕಾರ್ಯಕರ್ತರ ಸಲಹೆ ಪಡೆದುಕೊಂಡು ಎಲ್ಲರನ್ನೂ ಜೊತೆ ಸೇರಿಸಿಕೊಂಡು ಪಕ್ಷ ಸಂಘಟನೆ ಮಾಡುವದಾಗಿ ನೂತನವಾಗಿ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ನಾಪಂಡ ಎಂ.ರವಿ ಕಾಳಪ್ಪ ಹೇಳಿದ್ದಾರೆ.
‘ಶಕ್ತಿ’ ಅವರನ್ನು ಮಾತನಾಡಿಸಿದ ಸಂದರ್ಭ ಜಿಲ್ಲೆಯಲ್ಲಿ ಕಳೆದ ವಿಧಾಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಕಳೆದುಕೊಂಡಿರುವುದು ನಿಜ, ಆದರೂ ಪಕ್ಷ ಸಂಘಟನೆ ಕುಂಠಿತವಾಗಿಲ್ಲ, ಈ ಹಿಂದಿನಕ್ಕಿAತ ಹೆಚ್ಚಿನ ಮತಗಳು ಬಂದಿವೆ. ಸ್ಥಳೀಯ ಸಂಸ್ಥೆ ಚುನಾವಣೆಗೂ ಲೋಕಸಭಾ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ದೇಶಕ್ಕೆ ನರೇಂದ್ರ ಮೋದಿ ಬೇಕು, ಅವರು ಮತ್ತೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಬೇಕು ಎಂಬ ಭಾವನೆ ಎಲ್ಲರಲ್ಲೂ ಇದೆ. ಹಾಗಾಗಿ ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗಾಗಿ ಪ್ರಯತ್ನಿಸುತ್ತೇವೆ. ಕಾರ್ಯಕರ್ತರಲ್ಲೂ ಯಾವದೇ ಗೊಂದಲವಿಲ್ಲ. ಈ ಚುನಾವಣೆ ಹಾಗೂ ಪಕ್ಷ ಸಂಘಟನೆಯನ್ನು ಸವಾಲಾಗಿ ಸ್ವೀಕರಿಸುವದಾಗಿ ಹೇಳಿದರು.