ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಚಾಲನೆ
ಇಂಫಾಲಾ, ಜ. ೧೪: ಜನಾಂಗೀಯ ಕಲಹ ಪೀಡಿತ ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡನೇ ದೊಡ್ಡ ಪಾದಯಾತ್ರೆ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಚಾಲನೆ ಸಿಕ್ಕಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ೬,೭೧೩ ಕಿ.ಮೀ. ದೂರ ಪಾದಯಾತ್ರೆ ಮಾಡಲಿದ್ದಾರೆ. ಇದು ೧೦೦ ಲೋಕಸಭಾ ಕ್ಷೇತ್ರಗಳು ಮತ್ತು ೩೩೭ ವಿಧಾನಸಭಾ ಕ್ಷೇತ್ರಗಳನ್ನು ವ್ಯಾಪಿಸಿ ೧೧೦ ಜಿಲ್ಲೆಗಳನ್ನು ಒಳಗೊಳ್ಳುವ ಮೂಲಕ ೬,೭೧೩ ಕಿ.ಮೀ. ದೂರವನ್ನು ಕ್ರಮಿಸಲಿದೆ. ೬೭ ದಿನಗಳ ನಂತರ ಮಾರ್ಚ್ ೨೦ ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ. ಮಣಿಪುರದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಾನು ಮೊದಲ ಬಾರಿಗೆ ಭಾರತದ ಆಡಳಿತ ವ್ಯವಸ್ಥೆ ಕುಸಿದ ರಾಜ್ಯಕ್ಕೆ ಬಂದಿದ್ದೇನೆ. ಅದನ್ನು ನಾವು ಮಣಿಪುರ ಎಂದು ಕರೆಯುತ್ತೇವೆ. ಇಲ್ಲಿ ಹಿಂಸೆ ನಡೆಯುತ್ತಿದ್ದರೂ ಪ್ರಧಾನಿ ಎಲ್ಲಿದ್ದಾರೆ. ಭಾರತದ ಜನರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀವ್ರ ಅನ್ಯಾಯವನ್ನು ಅನುಭವಿಸುತ್ತಿರುವ ಕಾರಣ ಈ ‘ನ್ಯಾಯ ಯಾತ್ರೆ' ಆರಂಭಿಸಿದ್ದೇವೆ ಎಂದು ಹೇಳಿದರು.
ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲು!
ಕಾರವಾರ, ಜ. ೧೪: ಬಾಬ್ರಿ ಮಸೀದಿ ನಿರ್ನಾಮವಾದಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮವಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ. ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅವರು, ಎಲ್ಲೆಲ್ಲಿ ದೇವಸ್ಥಾನ ಒಡೆದು ಮಸೀದಿಗಳನ್ನು ಕಟ್ಟಿದ್ದಾರೋ ಅಲ್ಲೆಲ್ಲ ಮತ್ತೆ ದೇವಸ್ಥಾನ ನಿರ್ಮಾಣವಾಗಲಿದೆ. ಅದೇ ರೀತಿ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮವಾಗುತ್ತದೆ. ಇದನ್ನು ಬೇಕಾದರೆ ಬೆದರಿಕೆ ಅಂತ ಬೇಕಾದರೂ ತಿಳಿಯಿರಿ ಎಂದು ಹೇಳಿದ್ದರು. ಈ ಸಂಬAಧ ಕುಮಟಾ ಪೊಲೀಸ್ ಠಾಣೆಯಲ್ಲಿ ಸುವೋಟೊ ಕೇಸ್ ದಾಖಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ೭ ಕೋಟಿ ಮೌಲ್ಯದ ವಜ್ರ ವಶಕ್ಕೆ!
ಬೆಂಗಳೂರು, ಜ. ೧೪: ಕೆಂಪೇಗೌಡ ಅಂರ್ರಾಷ್ಟಿçÃಯ ವಿಮಾನ ನಿಲ್ದಾಣದಿಂದ ದುಬೈಗೆ ಅಕ್ರಮವಾಗಿ ಸಾಗಿಸುತ್ತಿದ್ದ ೭.೭೬ ಕೋಟಿ ಮೌಲ್ಯದ ೮,೦೫೩ ಕ್ಯಾರೆಟ್ ತೂಕದ ವಜ್ರಗಳು, ರೂ. ೪.೬೨ ಲಕ್ಷ ಮೊತ್ತದ ಅಮೆರಿಕ ಡಾಲರ್ ಮತ್ತು ದಿರ್ಹಂ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ಕಳ್ಳಸಾಗಣೆ ಮಾಡಲು ಯತ್ನಿಸಿದ ಚಿಕ್ಕಬಳ್ಳಾಪುರದ ಇಬ್ಬರು ಪ್ರಯಾಣಿಕರನ್ನು ವೈಮಾನಿಕ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಮುಂಬೈನಿAದ ಬೆಂಗಳೂರಿಗೆ ವಜ್ರಗಳನ್ನು ತಂದಿದ್ದ ಈ ಇಬ್ಬರೂ ಅವನ್ನು ಚಾಕೊಲೇಟ್ ಪ್ಯಾಕ್ನಲ್ಲಿ ಬಚ್ಚಿಟ್ಟು ದುಬೈಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ವೈಮಾನಿಕ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಸುಳಿವು ದೊರೆತಿತ್ತು. ರನ್ ವೇ ಬೇಯಲ್ಲಿ ದುಬೈಗೆ ಹಾರಲು ಸಿದ್ಧವಾಗಿದ್ದ ವಿಮಾನದಲ್ಲಿ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ಈ ವೇಳೆ ಪ್ರಯಾಣಿಕರ ಬ್ಯಾಗ್ನಲ್ಲಿದ್ದ ಚಾಕೊಲೇಟ್ ಪ್ಯಾಕ್ನಲ್ಲಿ ಅಡಗಿಸಿ ಇಡಲಾಗಿದ್ದ ವಜ್ರಗಳು ಪತ್ತೆಯಾಗಿವೆ.
ಸಂಚಾರ ನಿಯಮ ಉಲ್ಲಂಘನೆ: ೫ ತಿಂಗಳಲ್ಲಿ ರೂ. ೬.೯೭ ಕೋಟಿ ದಂಡ
ಶಿವಮೊಗ್ಗ, ಜ. ೧೪: ಸಂಚಾರ ಪೊಲೀಸರು ಹೆಚ್ಚಿನ ಸಾಂದ್ರತೆಯ ಕ್ಯಾಮರಾಗಳ ಮೂಲಕ ನಿಯಮ ಉಲ್ಲಂಘನೆಗೆ ದಂಡವನ್ನು ವಿಧಿಸುತ್ತಿದ್ದರೂ ನಗರದ ನಿವಾಸಿಗಳು ಇನ್ನೂ ಗಂಭೀರವಾಗಿಲ್ಲ. ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಯೋಜಿತ ಸಂಚಾರ ನಿರ್ವಹಣೆ ವ್ಯವಸ್ಥೆ (ಐಟಿಎಂಎಸ್) ಅಡಿಯಲ್ಲಿ ಶಿವಮೊಗ್ಗ ಪೊಲೀಸರು ಅಳವಡಿಸಲಾಗಿರುವ ಕ್ಯಾಮೆರಾಗಳ ಸಹಾಯದಿಂದ ಐದು ತಿಂಗಳ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ರೂ. ೬.೯೭ ಕೋಟಿ ದಂಡವನ್ನು ವಿಧಿಸಿದ್ದಾರೆ. ಆದರೆ ಇಲ್ಲಿಯವರೆಗೆ ಕೇವಲ ರೂ. ೪೦ ಲಕ್ಷ ಪಾವತಿಸಲಾಗಿದೆ. ಒಟ್ಟು ೮೯,೫೬೨ ಇ-ಚಲನ್ಗಳು ಬಾಕಿ ಉಳಿದಿದ್ದು, ಉಲ್ಲಂಘಿಸಿದವರು ಇನ್ನೂ ೬.೫೭ ಕೋಟಿ ರೂ.ಗಳ ದಂಡವನ್ನು ಪಾವತಿಸಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಅನಿಲ್ ಕುಮಾರ್ ಭೂಮರೆಡ್ಡಿ ಮಾಹಿತಿ ನೀಡಿದ್ದಾರೆ.
ಪತಿಯನ್ನು ಕೊಂದಿದ್ದ ಪತ್ನಿ, ಪ್ರಿಯಕರನ ಬಂಧನ
ಬೆAಗಳೂರು, ಜ. ೧೪: ಪ್ರಿಯಕರನ ಜತೆ ಸೇರಿ ಪತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿ ಬಳಿಕ ಜಾರಿ ಬಿದ್ದು ಮೃತಟ್ಟಿದ್ದಾನೆಂದು ನಾಟಕವಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ನಂದಿನಿ ಬಾಯಿ (೨೨) ಮತ್ತು ಆಕೆಯ ಪ್ರಿಯಕರ ನಿತೀಶ್ ಕುಮಾರ್ (೨೨) ಬಂಧಿತರು. ಆರೋಪಿಗಳು ತಾ. ೯ ರಂದು ರಾತ್ರಿ ವೆಂಕಟರಮಣ ನಾಯಕ್ (೩೦) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು. ಮೃತನ ತಂದೆ ಲಕ್ಷ್ಮೀ ನಾಯಕ್ ಈ ಸಂಬAಧ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ವೆಂಕಟರಮಣ ನಾಯಕ್ ಅವರ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಕ್ಕೊಳಪಡಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಮೂಲದ ವೆಂಕಟರಮಣ ನಾಯಕ್ ನಾಲ್ಕು ವರ್ಷದ ಹಿಂದೆ ಸಂಬAಧಿ ನಂದಿನಿ ಬಾಯಿಯನ್ನು ಮದುವೆಯಾಗಿದ್ದರು. ದಂಪತಿಗೆ ಎರಡು ಹೆಣ್ಣು ಮಕ್ಕಳಿವೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ
ಮಂಡ್ಯ, ಜ. ೧೪: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ನಡೆದಿದೆ. ಮದ್ದೂರು ಪಟ್ಟಣದ ಶಿಂಷಾ ನದಿ ಬಳಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಮೃತರನ್ನು ಶಂಕರ್, ಮಹದೇವು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮೂವರು ಕೆಲಸ ಮುಗಿಸಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಶಿಂಷಾ ನದಿ ಸೇತುವೆ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ, ಬಳಿಕ ಕ್ಯಾಮೆರಾ ಇದ್ದ ಕಂಬಕ್ಕೂ ಡಿಕ್ಕಿ ಹೊಡೆದು, ಡಿವೈಡರ್ ಪಕ್ಕದ ರಸ್ತೆಗೆ ಮಗುಚಿಬಿದ್ದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪರಿಣಾಮ ಶಂಕರ್ ಹಾಗೂ ಮಹದೇವು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿರುವ ಕಿಶೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳಕ್ಕೆ ಮದ್ದೂರು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬAಧ ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.