ಮಡಿಕೇರಿ, ಜ. ೧೪: ಅಬಕಾರಿ ಇಲಾಖೆ ಮೂಲಕ ಸರಕಾರಕ್ಕೆ ಅತೀ ಹೆಚ್ಚು ಆದಾಯವನ್ನು ಪುಟ್ಟ ಜಿಲ್ಲೆಯಾಗಿರುವ ಕೊಡಗು ನೀಡುತ್ತಿದೆ. ಆದರೆ, ಅದೇ ಇಲಾಖೆಗೆ ಸ್ವಂತ ಕಟ್ಟಡ ಎನ್ನುವುದು ಮರೀಚಿಕೆಯಾಗಿದೆ. ಕೋಟಿ ವೆಚ್ಚದ ಯೋಜನೆ ಇದೀಗ ಕಾಡು ಸೇರಿಸಿದ ಕೀರ್ತಿ ಸರಕಾರಕ್ಕೆ ಸಲ್ಲುತ್ತದೆ. ಇಚ್ಛಾಶಕ್ತಿಯ ಕೊರತೆ, ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದ ಪರಿಣಾಮ ವಿಶಾಲವಾದ ಕಟ್ಟಡ ಪಾಳು ಬಿದ್ದು, ಅನಾಥ ಸ್ಥಿತಿಯಲ್ಲಿದೆ. ೧೪ ವರ್ಷದ ವನವಾಸ ಕಳೆದು ೧೫ ವರ್ಷಕ್ಕೆ ಪದಾರ್ಪಣೆ ಮಾಡಿದರೂ ಕಟ್ಟಡ ಮಾತ್ರ ಮೇಲೇಳುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ವ್ಯಯಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

೨೦೦೪-೦೫ರಲ್ಲಿ ಜಿಲ್ಲೆಗೆ ಅಬಕಾರಿ ಭವನ ನಿರ್ಮಿಸುವ ನಿಟ್ಟಿನಲ್ಲಿ ಸರಕಾರ ಯೋಜನೆ ಮಂಜೂರು ಮಾಡಿತ್ತು. ಇದಕ್ಕಾಗಿ ಜಿಲ್ಲಾಡಳಿತ ವತಿಯಿಂದ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಟುಹೊಳೆ ಸಮೀಪದಲ್ಲಿ ನಿವೇಶನ ಗುರುತಿಸಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಯಿತು. ನೆಲಅಂತಸ್ತು ಸೇರಿ ಕೆಲ ನಿರ್ಮಾಣ ಕಾರ್ಯದ ಬಳಿಕ ಅನುದಾನ ಕೊರತೆಯಿಂದ ಯೋಜನೆ ಹಳ್ಳ ಹಿಡಿದಿದ್ದು, ಕಾಮಗಾರಿ ಸ್ಥಗಿತಗೊಂಡು ಹಲವು ವರ್ಷಗಳೇ ಉರುಳಿವೆ.

ರೂ. ೨ ಕೋಟಿಯ ಯೋಜನೆ

ಉದ್ದೇಶಿತ ಅಬಕಾರಿ ಭವನ ನಿರ್ಮಾಣ ಯೋಜನೆಯ ಪ್ರಕ್ರಿಯೆ ೨೦೦೫ರಲ್ಲಿ ಆರಂಭಗೊAಡಿತು. ಈ ನಿಟ್ಟಿನಲ್ಲಿ ರೂ. ೨ ಕೋಟಿಯ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಪ್ರಥಮ ಹಂತವಾಗಿ ರೂ. ೭೦ ಲಕ್ಷವನ್ನು ಅಬಕಾರಿ ಇಲಾಖೆ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಗೊಳಿಸಿತು.

೨೦೦೯ರಲ್ಲಿ ಇ-ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿ ಅದೇ ವರ್ಷ ಪ್ರಥಮ ಹಂತದ ಕಾಮಗಾರಿಯನ್ನು ಆರಂಭಿಸಲಾಯಿತು. ಬಿಡುಗಡೆಯಾದ ಹಣದಲ್ಲಿ ನೆಲ ಅಂತಸ್ತು ಜೊತೆಗೆ ಬಂದಿಖಾನೆ, ಅಬಕಾರಿ ಇಲಾಖೆ ವಶಪಡಿಸಿಕೊಂಡ ವಸ್ತುಗಳನ್ನು ದಾಸ್ತಾನಿಡಲು ಗೋದಾಮು, ಶೌಚಾಲಯವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಯಿತು. ಬಳಿಕ ಅನುದಾನ ಕೊರತೆಯಿಂದ ಯೋಜನೆ ಸ್ಥಗಿತಗೊಂಡು ೧೪ ವರ್ಷ ಕಳೆದರೂ ಕಟ್ಟಡ ಮೇಲೇಳಲಿಲ್ಲ. ಈ ಬಗ್ಗೆ ಹಲವು ಬಾರಿ ಪತ್ರ ವ್ಯವಹಾರ ಮಾಡಿದರು ಪ್ರಯೋಜನವಾಗಿಲ್ಲ.

ಬೇಕಿದೆ ರೂ. ೪.೯೫ ಕೋಟಿ

ಅಂದು ರೂ. ೨ ಕೋಟಿಯಲ್ಲಿ ಮುಗಿಯುತ್ತದೆ ಎನ್ನಲಾದ ಯೋಜನೆಗೆ ಪ್ರಸ್ತುತ ಹೆಚ್ಚುವರಿಯಾಗಿ ಇನ್ನೂ ರೂ. ೪ ಕೋಟಿ ೯೫ ಲಕ್ಷ ರೂಪಾಯಿಯ ಅವಶ್ಯಕತೆ ಇದೆ. ಕಟ್ಟಡ ಸಾಮಗ್ರಿಗಳ ಬೆಲೆ, ಕಾರ್ಮಿಕರ ಕೂಲಿ ಹೆಚ್ಚಾಗಿರುವುದು ಇದಕ್ಕೆ ಕಾರಣಗಳಾಗಿವೆ. ಒಟ್ಟು ಯೋಜನೆಯ ಹಣಕ್ಕಿಂತ ಪ್ರಸ್ತುತ ತಯಾರಿಸಿರುವ ಕ್ರಿಯಾಯೋಜನೆಯ ಮೊತ್ತ ದುಪ್ಪಟ್ಟಾಗಿದೆ.

ಕಟ್ಟಡವನ್ನು ಮತ್ತೆ ಬಳಸುವ ಉದ್ದೇಶದಿಂದಾಗಿ, ಕಟ್ಟಡವನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ, ಮೊದಲ ಮತ್ತು ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಎರಡನೇ ಮಹಡಿಯನ್ನು ನಿರ್ಮಿಸುವ ಕಾಮಗಾರಿಯನ್ನು ಆರಂಭಿಸಬೇಕಾದರೆ ರೂ. ೪.೯೫ ಕೋಟಿ ಅವಶ್ಯಕತೆ ಇದೆ ಎಂದು ಕ್ರಿಯಾಯೋಜನೆ ತಯಾರು ಮಾಡಿ ಇಲಾಖೆಗೆ ೨೦೧೯ರಲ್ಲಿ ನೀಡಲಾಗಿದೆ.

ಪಿ.ಡಬ್ಲೂö್ಯ.ಡಿ. ಇಲಾಖೆಯ ಮಾಹಿತಿಯಂತೆ ರೂ. ೪.೯೫ ಕೋಟಿ ಬಿಡುಗಡೆಯಾದಲ್ಲಿ ಮೊದಲ ಹಾಗೂ ೨ನೇ ಮಹಡಿ ನಿರ್ಮಾಣ, ಪೀಠೋಪಕರಣ ವ್ಯವಸ್ಥೆ, ನೀರು ಸರಬರಾಜು, ನೈರ್ಮಲೀಕರಣ ವ್ಯವಸ್ಥೆ ಸಮರ್ಪಕ ರಸ್ತೆ, ಚರಂಡಿ, ತಡೆಗೋಡೆ ಹಾಗೂ ಇತರೆ ಕೈಗೆತ್ತಿಕೊಳ್ಳಬಹುದಾಗಿದೆ.

ಕಾಡು ಸೇರಿದೆ ಕಟ್ಟಡ

ನೆಲಅಂತಸ್ತು ನಿರ್ಮಿಸಿ ಸ್ಥಗಿತಗೊಂಡಿರುವ ಕಟ್ಟಡ ಇದೀಗ ಕಾಡು ಸೇರಿ ಬೀಡಾಡಿ ದನಗಳ ವಾಸಸ್ಥಳವಾಗಿದೆ. ಕಿಟಕಿಯ ಗಾಜುಗಳು ಒಡೆದಿವೆ. ಶಟ್ರ‍್ಸ್, ಬಾಗಿಲು, ರಾಡ್‌ಗಳು ತುಕ್ಕು ಹಿಡಿದಿವೆ. ಶೌಚಾಲಯ ಅಶುಚಿತ್ವದಿಂದ ಕೂಡಿದೆ. ರಸ್ತೆಯಿಂದ ಕಟ್ಟಡಕ್ಕೆ ತೆರಳುವ ಮಾರ್ಗ ಗಿಡಗಂಟಿಗಳಿAದ ತುಂಬಿ ಕಟ್ಟಡದೊಳಗೆ ಮಳೆ ನೀರು ಸೋರುತ್ತಿರುವುದರಿಂದ ಶಿಥಿಲವಾಗುತ್ತಿದೆ. ಸುತ್ತ ಕಾಡು ಬೆಳೆದು ಕಟ್ಟಡ ಗಿಡಗಂಟಿಗಳ ನಡುವೆ ಮರೆಯಾಗಿದೆ. ಪ್ರಾಥಮಿಕ ನಿರ್ವಹಣೆಯೂ ಇಲ್ಲದೆ ಕಟ್ಟಡ ಹಾಳಾಗುತ್ತಿದ್ದು, ಈ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.

ಬಿಡುಗಡೆಯಾಗದ ಅನುದಾನ

೨೦೧೯ರಲ್ಲಿ ರೂ. ೪.೯೫ ಕೋಟಿ ಬೇಕಾಗುತ್ತದೆ ಎಂದು ಅಂದಾಜು ಪಟ್ಟಿ ತಯಾರಿಸಿದ್ದರೂ ಇನ್ನೂ ಕೂಡ ಅನುದಾನ ಬಂದಿಲ್ಲ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳು, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿವೆ. ಇನ್ನೂ ಸಮಯ ಕಳೆದರೆ ಕ್ರಿಯಾ ಯೋಜನೆಯ ಹಣ ಕೂಡ ಹೆಚ್ಚು ಬೇಕಾಗುವುದರಲ್ಲಿ ಅನುಮಾನವಿಲ್ಲ.ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರಂತರ ಪತ್ರ ವ್ಯವಹಾರ ಮಾಡುತ್ತಿದ್ದು, ಸಕರಾತ್ಮಕ ಸ್ಪಂದನ ಮಾತ್ರ ಸರಕಾರ ದಿಂದ ದೊರೆಯುತ್ತಿಲ್ಲ. ಟಿ ಹೆಚ್.ಜೆ. ರಾಕೇಶ್