ಮಡಿಕೇರಿ,ಜ.೧೨: ಸುವರ್ಣ ಕರ್ನಾಟಕ ೫೦ರ ಸಂಭ್ರಮದ ಅಂಗವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಹಾಗೂ ಭಾಗಮಂಡಲ ಹೋಬಳಿ ಪರಿಷತ್ತು, ಕುಂದಚೇರಿ, ಭಾಗಮಂಡಲ ಮತ್ತು ಅಯ್ಯಂಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಿರಿ ಆಚರಣಾ ಸಮಿತಿ ಸಹಯೋಗ ದೊಂದಿಗೆ ಗ್ರಾಮಸಿರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎರಡು ದಿನಗಳ ಕಾಲ ಚೆಟ್ಟಿಮಾನಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್; ಗ್ರಾಮೀಣ ಜನರ ಬದುಕು, ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಮುಂತಾದವುಗಳನ್ನು ಯುವ ಪೀಳಿಗೆಗೆ ಪರಿಚಯಿಸುವದರೊಂದಿಗೆ ಗ್ರಾಮದಲ್ಲಿ ಪರಸ್ಪರ ಒಗ್ಗಟ್ಟು, ಸ್ನೇಹ, ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾ.೧೭ ಹಾಗೂ ೧೮ರಂದು ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಗ್ರಾಮೀಣ ಕ್ರೀಡಾಕೂಟ
ತಾ.೧೭ರಂದು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೭.೩೦ಗಂಟೆಗೆ ಗುಡ್ಡಗಾಡು ಓಟ ನಡೆಯಲಿದ್ದು, ಭಾಗಮಂಡಲ ಗ್ರಾಮ ಪಂಚಾಯಿತಿ ಸದಸ್ಯೆ ಚೆದುಕಾರು ಪೆಮಿತ ಉದ್ಘಾಟಿಸುವರು. ಮ್ಯಾರಥಾನ್ ಓಟವನ್ನು ಕೇಕಡ ಗಿರೀಶ್ ಹಾಗೂ ಕೋಟೆಮನೆ ಮೋಹಿನಿ ಉದ್ಘಾಟನೆ ಮಾಡುವರು. ನಂತರ ೮.೩೦ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಸಮರಂಭ ನಡೆಯಲಿದ್ದು, ಬೆಳೆಗಾರ ಮಂಗೇರಿರ ಕುಂಞಪ್ಪ ಧ್ವಜಾರೋಹಣ ಮಾಡುವರು. ಕ್ರೀಡಾಪಟು ಕೋಟೆಮನೆ ವಿಜಯ್ಕುಮಾರ್ ಕ್ರೀಡಾಕೂಟವನ್ನು ಉದ್ಘಾಟಿಸುವರು. ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ ಕ್ರೀಡಾ ಜ್ಯೋತಿ ಬೆಳಗುವರು. ಸಂಜೆ ೪ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಭಾಗಮಂಡಲ ಹೋಬಳಿ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಎಸ್.ಶ್ರೀಧರ್ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಬಹುಮಾನ ವಿತರಣೆ ಮಾಡುವರು. ಅತಿಥಿಗಳಾಗಿ ಗ್ರಾಮದ ಗಣ್ಯರು ಉಪಸ್ಥಿತರಿರುವರು ಎಂದು ರಮೇಶ್ ತಿಳಿಸಿದರು.
ಗ್ರಾಮ ಸಿರಿ ಕಾರ್ಯಕ್ರಮ
ತಾ.೧೮ರಂದು ಬೆಳಿಗ್ಗೆ ೮ ಗಂಟೆಯಿAದ ಗ್ರಾಮಸಿರಿ ಕಾರ್ಯಕ್ರಮಾರಂಭಗೊಳ್ಳಲಿದೆ. ಕುಂದಚೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪೊಡನೋಳನ ದಿನೇಶ್ ರಾಷ್ಟç ಧ್ವಜಾರೋಹಣ ಮಾಡುವರು. ಕಸಾಪ ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಪತ್ರಾವೊ ಕನ್ನಡ ಧ್ವಜಾರೋಹಣ ಮಾಡುವರು.
ಜಾನಪದ ಮೆರವಣಿಗೆ
ಅಂದು ಬೆಳಿಗ್ಗೆ ೯ಗಂಟೆಗೆ ಆಕರ್ಷಕ ಜಾನಪದ ಮೆರವಣಿಗೆ ನಡೆಯಲಿದೆ.
(ಮೊದಲ ಪುಟದಿಂದ) ಭಾಗಮಂಡಲ ಕಾವೇರಿ ಪ.ಪೂ. ಕಾಲೇಜು ಬಳಿಯಿಂದ ಮೆರವಣಿಗೆ ಹೊರಡಲಿದ್ದು, ಸುಮಾರು ಮೂರು ಕಿ.ಮಿ.ವರೆಗೆ ಸಾಗಲಿದೆ. ಮೆರವಣಿಗೆಯಲ್ಲಿ ಮೂರು ಗ್ರಾಮಗಳ ಹಳ್ಳಿಗಾಡಿನ ಜಾನಪದ ಶೈಲಿಯ ಕಲಾತಂಡಗಳು ಭಾಗವಹಿಸಲಿವೆ. ಇದರೊಂದಿಗೆ ಇತರ ಕಲಾತಂಡಗಳು, ಗ್ರಾಮಸ್ಥರು ಮೆರವಣಿಗೆಗೆ ರಂಗು ತುಂಬಲಿದ್ದಾರೆ. ಕೋರಂಗಾಲ ವಾಜಪೇಯಿ ವಸತಿ ಶಾಲಾ ಪ್ರಾಂಶುಪಾಲ ಲೋಕೇಶ್ ಅಧ್ಯಕ್ಷತೆಯಲ್ಲಿ ಜರುಗುವ ಮೆರವಣಿಗೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಉದ್ಘಾಟಿಸುವರು ಎಂದು ರಮೇಶ್ ಮಾಹಿತಿ ನೀಡಿದರು.
ಪ್ರವೇಶ ದ್ವಾರಗಳ ಉದ್ಘಾಟನೆ
ಕಾರ್ಯಕ್ರಮದ ಅಂಗವಾಗಿ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ನಾಡಿನ ಹಿರಿಯರ ಹೆಸರಿನಲ್ಲಿ ದ್ವಾರಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಹೊಸೂರು ಜೋಯಪ್ಪ ನೆನಪಿನ ದ್ವಾರವನ್ನು ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಹೊಸೂರು ಸತೀಶ್ಕುಮಾರ್, ಕಡೋಡಿ ಮಹಾವಿಷ್ಣು ದ್ವಾರವನ್ನು ದಾನಿ ಕುಯ್ಯಮುಡಿ ಪೂರ್ಣಯ್ಯ, ಸುಳ್ಯಕೋಡಿ ಮತ್ತು ಕುಂಬಳಚೇರಿ ಮುಖ್ಯದ್ವಾರವನ್ನು ಸುಳ್ಯಕೋಡಿ ಅವನೀಶ್ಚಂದ್ರ ಮತ್ತು ಕುಂಬಳಚೇರಿ ಯಶವಂತ್ ಅವರು ಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ವಸ್ತು ಪ್ರದರ್ಶನ
ಗ್ರಾಮೀಣ ಭಾಗದಲ್ಲಿ ಉಪಯೋಗಿಸುತ್ತಿದ್ದಂತಹ ಹಳೆಯ ವಸ್ತುಗಳು, ಕೃಷಿ ಪರಿಕರಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಪ್ರದರ್ಶನ ಮಳಿಗೆಯನ್ನು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಮಾಜಿ ಅಧ್ಯಕ್ಷೆ ಕುಂಚಡ್ಕ ಕಸ್ತೂರಿ ಉದ್ಘಾಟನೆ ಮಾಡುವರು. ಎದುರ್ಕಳ ಶಂಕರನಾರಾಯಣ ಭಟ್ ಪುಸ್ತಕ ಮಳಿಗೆಯನ್ನು ಭಾಗಮಂಡಲ ಕಸಾಪ ಮಾಜಿ ಅಧ್ಯಕ್ಷ ಕುದುಕುಳಿ ಭರತ್, ಸ್ವಾತಂತ್ರö್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸಭಾಮಂಟಪವನ್ನು ಕೆದಂಬಾಡಿ ಎಸ್. ಜಯಪ್ರಕಾಶ್, ಮೇಜರ್ ಮಂಗೇರಿರ ವಿನೋದ್ ಮುತ್ತಣ್ಣ ಮುಖ್ಯ ವೇದಿಕೆಯನ್ನು ಮಂಗೇರಿರ ಪಾಲಿ ಚಿಣ್ಣಪ್ಪ ಉದ್ಘಾಟನೆ ಮಾಡುವರೆಂದು ರಮೇಶ್ ಹೇಳಿದರು.
ಉದ್ಘಾಟನಾ ಸಮಾರಂಭ
ಬೆಳಿಗ್ಗೆ ೧೦.೩೦ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟನೆ ಮಾಡುವರು. ಗ್ರಾಮ ಸಿರಿ ಸ್ವಾಗತ ಸಮಿತಿ ಅಧ್ಯಕ್ಷ ಪಾಣತ್ತಲೆ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಕಿರು ಹೊತ್ತಿಗೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ, ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ೧೨.೩೦ ಗಂಟೆಗೆ ಸಾಹಿತಿ ಮೇ.ಡಾ.ಕುಶ್ವಂತ್ ಕೋಳಿಬೈಲು ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದ್ದು, ಸಮಾಜ ಸೇವಕ ಬೇಕಲ್ ರಮಾನಾಥ್ ಗ್ರಾಮೀಣ ಜನರ ಸಮಸ್ಯೆಗಳು ಎಂಬ ವಿಷಯದಡಿ ವಿಚಾರ ಮಂಡನೆ ಮಾಡುವರು. ನಂತರ ಸ್ಥಳೀಯ ಕಲಾವಿದರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಬಳಿಕ ಚೇರಂಬಾಣೆ ಅರುಣ ಪ.ಪೂ. ಕಾಲೇಜು ಪ್ರಾಂಶುಪಾಲ ದಾಯನ ಎಸ್.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೂಡಕಂಡಿ ದಯಾನಂದ ಗ್ರಾಮೀಣ ಜನರ ಬದುಕು, ಸಂಸ್ಕೃತಿ ಮತ್ತು ಜಾನಪದ ವಿಷಯದಡಿ ವಿಚಾರಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೨೦ ಮಂದಿಯನ್ನು ಸನ್ಮಾನ ಮಾಡಲಾಗುತ್ತಿದೆ. ಸಂಜೆ ೪ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಕಸಾಪ ಅಧ್ಯಕ್ಷ ಸುನಿಲ್ ಪತ್ರಾವೊ ವಹಿಸಲಿದ್ದು, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಸತೀಶ ಸಿಂಗ್ ಸನ್ಮಾನ ಮಾಡಲಿದ್ದಾರೆ. ೪.೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂಥರ್ ಗೌಡ, ಕರ್ನಾಟಕ ವಿಧಾನ ಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕಾವೇರಿ ಪ.ಪೂ.ಕಾಲೇಜು ಪ್ರಾಂಶುಪಾಲ ಕೆ.ಜೆ. ದಿವಾಕರ ಸಮಾರೋಪ ಭಾಷಣ ಮಾಡುವರು. ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲಾಧಿಕಾರಿ ವೆಂಕಟ್ ರಾಜಾ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ವರ್ಣಿತ್ ನೇಗಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶೇಖರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ರಮೇಶ್ ತಿಳಿಸಿದರು.
ಐದು ಸಾವಿರ ಜನ
ಮೂರು ಗ್ರಾಮಗಳ ಜನರೇ ಸೇರಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಯಶಸ್ವಿಗಾಗಿ ಒಟ್ಟು ೧೨ ಉಪ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಸಮಿತಿಯವರು ಕಷ್ಟಪಟ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಹಿತ್ಯ ಪರಿಷತ್ತಿನ ಮೂಲಕ ಮಾರ್ಗದರ್ಶನ ನೀಡಿದ್ದೇವೆ. ಅಂದಾಜು ಐದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಎರಡೂ ದಿನಗಳ ಕಾಲ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ರಮೇಶ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕುಂದಚೇರಿ ಗ್ರಾ.ಪಂ.ಅಧ್ಯಕ್ಷ ಪೊಡನೋಳನ ದಿನೇಶ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಕುಯ್ಯಮುಡಿ ಮನೋಜ್, ಪ್ರಚಾರ ಸಮಿತಿ ಸಂಚಾಲಕ ಮಧು ಚೆಟ್ಟಿಮಾನಿ, ಭಾಗಮಂಡಲ ಕಸಾಪ ಅಧ್ಯಕ್ಷ ಸುನಿಲ್ ಪತ್ರಾವೊ ಇದ್ದರು.