ವಾಸು ಎ.ಎನ್.
ಸಿದ್ದಾಪುರ, ಜ ೧೨: ಖಾವಿ ಬಟ್ಟೆ ಧರಿಸಿ ಸ್ವಾಮೀಜಿಯಂತೆ ಬಂದು ಕೈಗೆ ಹೂ ನೀಡಿ ಮಂಕು ಬರಿಸಿ ಹಣ ಪಡೆಯುತ್ತಿದ್ದ ವ್ಯಕ್ತಿ ಹಿಂದೆ ಬಿದ್ದಿರುವ ಜಿಲ್ಲಾ ಪೋಲಿಸರು, ಸದ್ಯಕ್ಕೆ ಹಣವನ್ನು ನೀಡಿದವರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವಾಮೀಜಿಯಂತೆ ಬಂದ ವ್ಯಕ್ತಿಯ ಬಂಧನಕ್ಕೆ ತನಿಖೆ ಮುಂದುವರೆದಿದೆ.
ಇತ್ತೀಚಿಗೆ ಕಾರಿನಲ್ಲಿ ಮನೆಗಳಿಗೆ ಭೇಟಿ ನೀಡಿ ಮನೆಯಲ್ಲಿ ದೋಷಗಳಿವೆ. ಸರಿಪಡಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟು ಕೇಳಿದಷ್ಟು ಹಣ ನೀಡದಿದ್ದ ಸಂದರ್ಭ ಕೈಗೆ ಹೂ ನೀಡಿ ಅವರಿಂದಲೇ ಹಣ ಪಡೆಯುತ್ತಿದ್ದ ವ್ಯಕ್ತಿ ಕುರಿತು ತಾ. ೮ ಹಾಗೂ ೧೦ರ ಶಕ್ತಿ ದಿನಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಗೊಂಡಿತ್ತು. ಇದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಹೆಚ್ಚಿನ ಆಸಕ್ತಿ ವಹಿಸಿ ಪ್ರಕರಣ ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಿದರು.
ಸಿದ್ದಾಪುರದ ಗುಹ್ಯ ಗ್ರಾಮದ ಮಹಿಳೆಯಿಂದ ರೂ. ೫೧ ಸಾವಿರವನ್ನು ಗೂಗಲ್ ಪೇ ಮೂಲಕ ಪಡೆದುಕೊಂಡ ಸಂದರ್ಭ ವಿಳಾಸವನ್ನು ನೀಡಿದ್ದ ಸ್ವಾಮೀಜಿಯಂತೆ ಬಂದಿದ್ದ ತಮ್ಮಣ್ಣ ಎಂಬಾತನ ವಿಳಾಸವನ್ನು ಪತ್ತೆ ಹಚ್ಚುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾದರು. ವಿಶೇಷ ತಂಡವು ಚಿಕ್ಕಮಗಳೂರಿನ ಕಡೂರು ತಾಲೂಕಿಗೆ ತೆರಳಿ ಸ್ಥಳೀಯ ಪೊಲೀಸರ ಸಹಾಯ ಪಡೆದುಕೊಂಡರು. ನಂತರ ಕಡೂರು ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ತೆರಳಿದರು. ಅಲ್ಲಿ ಮಾಹಿತಿ ಸಂಗ್ರಹ ಮಾಡಿ ತಮ್ಮಣ್ಣ ಎಂಬ ಸ್ವಾಮೀಜಿ ವೇಷಧಾರಿಯ ಬಗ್ಗೆ ವಿಚಾರಿಸಿದಾಗ ಮೋಸದ ಬಗ್ಗೆ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಕಡೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ‘ಸುಡುಗಾಡು ಸಿದ್ಧರು‘ ಎಂಬ ಜನಾಂಗವಿದ್ದು ಇವರು ವರ್ಷಕ್ಕೊಮ್ಮೆ ಸ್ವಾಮೀಜಿಯಂತೆ ಬಟ್ಟೆ ಧರಿಸಿ ಭಿಕ್ಷೆ ಬೇಡುತ್ತಾರೆ. ಮನೆ-ಮನೆಗಳಿಗೆ ತೆರಳಿ ದಾನದ ರೂಪದಲ್ಲಿ ಹಣ ಸಂಗ್ರಹ ಮಾಡುತ್ತಾರೆ. ಜೊತೆಗೆ ಬಲವಂತವಾಗಿ ಹಣವನ್ನು ಪಡೆಯುವಂತಿಲ್ಲ ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
(ಮೊದಲ ಪುಟದಿಂದ) ಪೊಲೀಸರು ತಮ್ಮಣ್ಣ ಅವರ ಕುಟುಂಬವನ್ನು ಕಂಡುಹಿಡಿದು ಕ್ರಮದ ಎಚ್ಚರಿಕೆ ನೀಡಿದ ಸಂದರ್ಭದಲ್ಲಿ ಕುಟುಂಬದವರು ಗುಹ್ಯ ಗ್ರಾಮದ ಮಹಿಳೆಯಿಂದ ಗೂಗಲ್ ಪೇ ಮೂಲಕ ಪಡೆದುಕೊಂಡ ರೂ. ೫೧ ಸಾವಿರ ಹಣವನ್ನು ಮಹಿಳೆಯ ಗೂಗಲ್ ಪೇ ಸಂಖ್ಯೆಗೆ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ವಾಲ್ನೂರು ಗ್ರಾಮದ ನಿವಾಸಿಯಿಂದ ಪಡೆದುಕೊಂಡಿದ್ದ ರೂ ೫ ಸಾವಿರ ನಗದನ್ನು ಪೊಲೀಸರ ಮುಖಾಂತರ ನೀಡಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆ ನಡುವೆ ಆರೋಪಿ ತಮ್ಮಣ್ಣ ತಲೆಮರೆಸಿಕೊಂಡಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ, ಮಡಿಕೇರಿ ವಿಭಾಗದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಮುಖ್ಯಪೇದೆ ರತನ್, ಸಿಬ್ಬಂದಿ ಬಸವರಾಜು ಪಾಲ್ಗೊಂಡಿದ್ದರು. ಇನ್ನಾದರು ಅಪರಿಚಿತ ವ್ಯಕ್ತಿಗಳು ಮನೆಗೆ ಬಂದು ಹಣ ನೀಡುವಂತೆ ಒತ್ತಾಯಿಸಿದ್ದಲ್ಲಿ ಮಾಹಿತಿ ನೀಡಬೇಕೆಂದು ಪೋಲಿಸರು ತಿಳಿಸಿದ್ದಾರೆ.