ಸೋಮವಾರಪೇಟೆ, ಜ. ೧೩: ಸಮೀಪದ ಐಗೂರು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಓರ್ವರು ಬರೋಬ್ಬರಿ ೧೫ ಲಕ್ಷ ಹಣವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಐಗೂರು ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್
ಆಗಿ ಕಳೆದ ೧೫ ವರ್ಷಗಳಿಂದ ಕೆಲಸ ಮಾಡುತ್ತಿರುವ ಐಗೂರು ಗ್ರಾಮದ ಸರಿತ ಎಂಬವರೇ ಈ ಕರಾಮತ್ತು ನಡೆಸಿ, ಕಚೇರಿ ಆಡಿಟ್ ಸಂದರ್ಭ ಸಿಕ್ಕಿಬಿದ್ದವರು.
(ಮೊದಲ ಪುಟದಿಂದ) ಈಕೆಯ ವಿರುದ್ಧ ಇದೀಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರು ತನಿಖೆ ಮುಂದುವರೆ ಸಿದ್ದಾರೆ. ಕಳೆದ ೧೫ ವರ್ಷದಿಂದ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಅನುಮೋದನೆಗೊಂಡು ಐಗೂರು ಗ್ರಾ.ಪಂ.ನಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಸರಿತ ಅವರು ಕೆಲಸ ಮಾಡಿಕೊಂಡಿದ್ದು, ತಾ. ೦೧/೦೫/೨೦೨೨ ರಿಂದ ೧೦/೧೧/೨೦೨೩ರ ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವೇತನ ಖಾತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೋಮವಾರಪೇಟೆ ಶಾಖೆಯಿಂದ ತಮ್ಮ ತಿಂಗಳ ವೇತನವಲ್ಲದೇ ಹೆಚ್ಚುವರಿಯಾಗಿ ೧೫,೨೯,೩೯೧ ರೂಪಾಯಿಗಳನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯಿತಿಯ ೫ನೇ ಹಣಕಾಸಿನ ಖಾತೆಯಿಂದ ರೂ. ೧,೧೧,೮೨೦ ಗಳನ್ನು ಗುತ್ತಿಗೆದಾರರುಗಳಾದ ಪುನೀತ್ ಎಂಟರ್ ಪ್ರೈಸಸ್ ರವರಿಗೆ ರೂ. ೨೨,೭೩೦, ಶಂಭುಗೌಡ ಅವರಿಗೆ ೫ ಕಂತುಗಳಲ್ಲಿ ರೂ. ೫೭,೯೮೭, ಕಾವೇರಿ ಟ್ರೇಡರ್ ಅವರಿಗೆ ೩ ಕಂತುಗಳಲ್ಲಿ ರೂ. ೭,೯೦೪ ಮತ್ತು ಪ್ರಶಾಂತ ರವರಿಗೆ ೨ ಕಂತುಗಳಲ್ಲಿ ರೂ. ೨೩,೧೯೯ ಗಳನ್ನು ಜಮೆಮಾಡಿ ಮತ್ತೆ ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಆ ಮೂಲಕ ಒಟ್ಟು ರೂ.೧೬,೪೧,೨೧೧ ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ನAತರ ಈ ಪೈಕಿ ತಾ.೨೯/೧೨/೨೦೨೩ ರಂದು ಸರಿತ ಅವರು ಚಲನ್ ಮುಖಾಂತರ ಗ್ರಾಮ ಪಂಚಾಯಿತಿ ಸಿಬ್ಬಂದಿ ಖಾತೆಗೆ ರೂ. ೪೯,೯೦೦ ಹಾಗೂ ರೂ. ೬,೧೦೦ ಗಳನ್ನು ಫೋನ್ ಪೇ ಮುಖಾಂತರ ಜಮೆ ಮಾಡಿದ್ದಾರೆ. ಒಟ್ಟಾರೆಯಾಗಿ ಸರಿತ ಅವರು ಐಗೂರು ಗ್ರಾಮ ಪಂಚಾಯತಿಯ ರೂ. ೧೫,೮೫,೨೧೧ ಗಳನ್ನು ದುರುಪಯೋಗ ಪಡಿಸಿಕೊಂಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿಡಿಓ ಬಾಲಕೃಷ್ಣ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳಿಗೆ ಸರ್ಕಾರದಿಂದ ಬರುವ ವೇತನ, ಕಾಮಗಾರಿಗಳ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಸರಿತ ಅವರ ಕರಾಮತ್ತು ಈವರೆಗೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲಿ ತಿಳಿದಿರಲಿಲ್ಲ. ಸಿಬ್ಬಂದಿಗಳ ವೇತನ ಖಾತೆಯ ಬಗ್ಗೆ ಜನಪ್ರತಿನಿಧಿಗಳು ಅಷ್ಟಾಗಿ ತಲೆಕೆಡಿಸಿಕೊಳ್ಳುವುದೂ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಂಪ್ಯೂಟರ್ ಆಪರೇಟರ್ ಈ ಕೃತ್ಯ ಎಸಗಿದ್ದಾರೆ. ಪಂಚಾಯಿತಿಯ ವಾರ್ಷಿಕ ಆಡಿಟ್ನಲ್ಲಿ ಮಹಾ ಮೋಸದ ಬಗ್ಗೆ ತಿಳಿದುಬಂದಿದ್ದು, ಪೊಲೀಸ್ ಠಾಣೆಯಲ್ಲಿ ಸರಿತ ವಿರುದ್ಧ ಕಲಂ ೪೦೬, ೪೦೯, ೪೨೦ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.