ಶ್ರೀಮಂಗಲ, ಜ. ೧೩: ಕೊಡಗು ಜಿಲ್ಲೆಯಲ್ಲಿ ವಾರಗಳ ಕಾಲ ಸುರಿದ ಅಕಾಲಿಕ ಮಳೆಯಿಂದ ಕಾಫಿ ಫಸಲು ವ್ಯಾಪಕವಾಗಿ ನಷ್ಟವಾಗಿರುವ ಬಗ್ಗೆ ತಕ್ಷಣದಿಂದಲೇ ಕಾಫಿ ಮಂಡಳಿಯಿAದ ನಷ್ಟ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವೀರಾಜಪೇಟೆ ಕ್ಷೇತ್ರ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಕಾಫಿ ಮಂಡಳಿ ಬೆಳೆ ನಷ್ಟ ಸಮೀಕ್ಷೆ ಆರಂಭಿಸಲಿದೆ ಎಂದು ಕಾಫಿ ಮಂಡಳಿ ಮೂಲಗಳು ತಿಳಿಸಿವೆ.

ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗ ಶಾಸಕರನ್ನು ವೀರಾಜಪೇಟೆಯಲ್ಲಿ ಭೇಟಿ ಮಾಡಿ, ಅಕಾಲಿಕ ಮಳೆಯಿಂದ ಉಂಟಾದ ಅಪಾರ ನಷ್ಟದ ಬಗ್ಗೆ ಮನವಿ ಪತ್ರ ಸಲ್ಲಿಸಿ ಮನವರಿಕೆ ಮಾಡಿದ ಬೆನ್ನಲ್ಲೇ ತಕ್ಷಣದಿಂದಲೇ ಕಾಫಿ ಬೆಳೆ ನಷ್ಟದ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.

ಕಾಫಿಯು ಕೇಂದ್ರ ಸರಕಾರದ ವಾಣಿಜ್ಯ ಸಚಿವಾಲಯ ಅಡಿಯಲ್ಲಿ ಬರುತ್ತಿದ್ದು, ಅಕಾಲಿಕ ಮಳೆಯಿಂದ ಉಂಟಾಗಿರುವ ಕಾಫಿ ಬೆಳೆಗಾರರ ಸಂಕಷ್ಟವನ್ನು ಪರಿಗಣನೆ ಮಾಡಬೇಕಾಗಿದೆ ಎಂದು ಪೊನ್ನಣ್ಣ ತಿಳಿಸಿದರು.

ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ: ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಯನ್ನು ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗ ಪ್ರತ್ಯೇಕವಾಗಿ ಭೇಟಿ ಮಾಡಿ ಬೆಳೆ ನಷ್ಟದ ಬಗ್ಗೆ ಮನವಿ ಸಲ್ಲಿಸಿತು. ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಮನವಿ ಸ್ವೀಕರಿಸಿ ಮಾತನಾಡಿ ನಷ್ಟದ ಸಮೀಕ್ಷೆಯನ್ನು ಕೈಗೊಳ್ಳಲು ಭಾರತೀಯ ಕಾಫಿ ಮಂಡಳಿಗೆ ಸೂಚಿಸುವುದಾಗಿ ತಿಳಿಸಿದರು. ಕಳೆದ ಮಳೆಗಾಲದಲ್ಲಿ ಕೊಳೆರೋಗಕ್ಕೆ ತುತ್ತಾದ ಕಾಫಿ ಬೆಳೆಯ ನಷ್ಟದ ಸಮೀಕ್ಷೆಯನ್ನು ನಡೆಸಲು ಕಾಫಿ ಮಂಡಳಿಗೆ ಸೂಚಿಸಲಾಗಿತ್ತು ಎಂದು ತಿಳಿಸಿದ ಅವರು, ಇದೀಗ ಸುರಿದಿರುವ ಅಕಾಲಿಕ ಮಳೆಯಿಂದ ಉಂಟಾಗಿ ರುವ ನಷ್ಟದ ಸಮೀಕ್ಷೆ ಯನ್ನು ಕೈ ಗೊಂಡು ವರದಿ ಸಲ್ಲಿಸಲು ಸೂಚಿಸು ವುದಾಗಿ ಭರವಸೆ ನೀಡಿದರು.

ಪರಿಹಾರ ಪರಿಷ್ಕರಣೆಗೆ ಮನವಿ: ಕಾಫಿ ಬೆಳೆ ನಷ್ಟಕ್ಕೆ ಎನ್.ಡಿ.ಆರ್. ಎಫ್. ಮಾನದಂಡ ಮೂಲಕ ನೀಡುವ ಪರಿಹಾರವನ್ನು ದಶಕಗಳಿಂದ

(ಮೊದಲ ಪುಟದಿಂದ) ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ ೨೦೨೦ರಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ಅಧ್ಯಯನ ತಂಡ ಆಗಮಿಸಿದ ಸಂದರ್ಭ ಕೊಡಗು ಬೆಳೆಗಾರರ ಒಕ್ಕೂಟ ನೀಡಿದ ಮನವಿಗೆ ಸ್ಪಂದಿಸಿ ಈಗ ಇರುವ ಹೆಕ್ಟೇರ್‌ಗೆ ರೂ. ೧೮ ಸಾವಿರ ಮೊತ್ತವನ್ನು ರೂ. ೫೦ ಸಾವಿರಕ್ಕೆ ಪರಿಷ್ಕರಣೆ ಮಾಡಿ, ಈಗ ಇರುವ ೨ ಹೆಕ್ಟೇರ್ ಗರಿಷ್ಠ ಮಿತಿಯನ್ನು ೫ ಹೆಕ್ಟೇರ್‌ಗೆ ಹೆಚ್ಚಿಸಲು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದು, ಇದನ್ನು ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರದ ಮೂಲಕ ಗಮನ ಸೆಳೆಯಲಾಯಿತು.

ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ಗೋಣಿಕೊಪ್ಪ ಕಾಫಿ ಮಂಡಳಿಯ ಉಪನಿರ್ದೇಶಕರ ಮೂಲಕ ಪ್ರತ್ಯೇಕ ಮನವಿಯನ್ನು ಸಲ್ಲಿಸಲಾಯಿತು.

ನಿಯೋಗದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಸದಸ್ಯರಾದ ಕೋಳೆರ ಭಾರತಿ, ಬಲ್ಯಮೀದೇರಿರ ಶರಣ್ ಚಂಗಪ್ಪ, ಬಲ್ಯಮೀದೇರಿರ ಸಂಪತ್ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಹಾಜರಿದ್ದರು.