ಮುಳ್ಳೂರು, ಜ. ೧೧: ಸಮೀಪದ ಮಾಲಂಬಿ ಗ್ರಾಮದಲ್ಲಿರುವ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದ ೪೮ನೇ ದಿನದ ಕೊನೆಯ ಪೂಜಾ ಕಾರ್ಯಕ್ರಮದ ಪ್ರಯುಕ್ತ ಬುಧವಾರ ಮಳೆ ಮಲ್ಲೇಶ್ವರ ಬೆಟ್ಟದಲ್ಲಿರುವ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಮಾಲಂಬಿ ಗ್ರಾಮದೊಳಗಿರುವ ಪುರಾತನ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನವನ್ನು ದೇವಾಲಯ ಸಮಿತಿ ಮತ್ತು ಗ್ರಾಮದ ದಾನಿಗಳಿಂದ ನೂತನವಾಗಿ ಜೀರ್ಣೋದ್ಧಾರಗೊಳಿಸಲಾಗಿತ್ತು. ನ. ೨೧ ರಿಂದ ೨೪ ರವರೆಗೆ ಶ್ರೀ ಕನ್ನಂಬಾಡಿ ಅಮ್ಮನವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ಧಾರ ದೇವಸ್ಥಾನದ ಉದ್ಘಾಟನೆ ಮತ್ತು ಪೂಜಾ ಮಹೋತ್ಸವವನ್ನು ನೆರವೇರಿಸಲಾಯಿತು. ನ. ೨೪ ರಿಂದ ದೇವಸ್ಥಾನದಲ್ಲಿ ೪೮ ದಿನಗಳು ಪ್ರತಿದಿನ ರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಅನ್ನದಾನವನ್ನು ಏರ್ಪಡಿಸಲಾಗಿತ್ತು. ೪೮ ದಿನಗಳ ತನಕ ಮಾಲಂಬಿ ಗ್ರಾಮದ ಒಟ್ಟು ೪೮ ಕುಟುಂಬದವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದರು. ಪ್ರತಿದಿನ ರಾತ್ರಿ ನಡೆಸುತ್ತಿದ್ದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದರು. ರಾತ್ರಿ ಭಕ್ತಾದಿಗಳಿಗೆ ಅನ್ನದಾನದ ಸೇವೆ ನಡೆಯಿತ್ತಿತ್ತು. ದೇವಸ್ಥಾನದಲ್ಲಿ ಭಕ್ತಾದಿಗಳು ಭಜನೆ, ದೇವರನಾಮ, ಭಕ್ತಿಗೀತೆ ಹಾಡುತ್ತಿದ್ದರು. ದೇವಸ್ಥಾನದ ೪೮ನೇ ದಿನದ ಕೊನೆಯ ಪೂಜೆಯಂದು ಭಕ್ತಾದಿಗಳು ಬುಧವಾರ ಹಗಲು ಶ್ರೀ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಮಾಡಿದ ಬಳಿಕ ವಾದ್ಯಗೋಷ್ಠಿಯೊಂದಿಗೆ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿ ಬೆಟ್ಟದ ತುದಿಯಲ್ಲಿರುವ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಬುಧವಾರ ರಾತ್ರಿ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ಮಹಾ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.