ಸಿದ್ದಾಪುರ, ಜ. ೧೧: ಕಾಡಾನೆಗಳಿಂದ ತತ್ತರಿಸಿರುವ ಕರಡಿಗೋಡು ಭಾಗದಲ್ಲಿ ಕಾಡುಕೋಣಗಳ ಹಿಂಡು ಬೀಡು ಬಿಟ್ಟಿದ್ದು ದಾಂಧಲೆ ನಡೆಸುತ್ತಿದ್ದು ಕಾಫಿ ಬೆಳಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕರಡಿಗೋಡು ಗ್ರಾಮದ ಕಂಬೀರAಡ ನಂದ ಗಣಪತಿ ಅವರ ಕಾಫಿ ತೋಟದೊಳಗೆ ೨೫ಕ್ಕೂ ಅಧಿಕ ಕಾಡು ಕೋಣಗಳು ಬೀಡುಬಿಟ್ಟಿದ್ದು ಫಸಲಿರುವ ಕಾಫಿ ಗಿಡ ಗಳನ್ನು ತುಳಿದು ಧ್ವಂಸ ಗೊಳಿಸಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟಗೊಂಡಿದೆ ಎಂದು ನಂದ ಗಣಪತಿ ತಿಳಿಸಿದ್ದಾರೆ.

ಕಾಡುಕೋಣಗಳು ಮರಿ ಕೋಣಗಳೊಂದಿಗೆ ಕಾಫಿ ತೋಟದೊಳಗೆ ದಾಂಧಲೆ ನಡೆಸುತ್ತಿದ್ದು ಇದರಿಂದಾಗಿ ಕಾರ್ಮಿಕರಿಗೆ ಕೆಲಸಕ್ಕೆ ತೆರಳಲು ಕೂಡ ಭಯದ ವಾತಾವರಣ ನಿರ್ಮಾಣವಾಗಿದೆ. ಕರಡಿಗೋಡು ಗ್ರಾಮದಲ್ಲಿ ಒಂಟಿಸಲಗ ಸೇರಿದಂತೆ ಕಾಡಾನೆಗಳು ಕಾಫಿ ತೋಟದೊಳಗೆ ರಾತ್ರಿ ಸಮಯದಲ್ಲಿ ಸುತ್ತಾಡುತ್ತಿದ್ದು ಫಸಲು ಬಂದಿರುವ ಅಡಿಕೆ ಮರಗಳು ಹಾಗೂ ಕಾಫಿ ಗಿಡಗಳನ್ನು ಎಳೆದು ಹಾಕಿ ತುಳಿದು ಹಾನಿಗೊಳಿಸುತ್ತಿವೆ. ಒಂದೆಡೆ ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬೆಳೆಗಾರರು ವನ್ಯಜೀವಿಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲದಂತಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿಗಳ ಉಪಟಳವನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಹಾಗೂ ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.